ಮಧ್ಯಪ್ರಾಚ್ಯ ಸಂಘರ್ಷ | ಇರಾನ್ನ ಬಾನುಲಿ ಕೇಂದ್ರದ ಮೇಲೆ ಇಸ್ರೇಲ್ ದಾಳಿ, 100 ಡಾಲರ್ ದಾಟಿದ ಕಚ್ಚಾ ತೈಲ ದರ

PC | PTI
ಟೆಹರಾನ್ : ಕಳೆದ 24 ದಿನಗಳಿಂದ ನಡೆಯುತ್ತಿರುವ ಗಲ್ಫ್ ಯುದ್ಧ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇರಾನ್ನ ಬಂದರ್ ಅಬ್ಬಾಸ್ನಲ್ಲಿರುವ ಬಾನುಲಿ ಕೇಂದ್ರದ ಮೇಲೆ ಇಸ್ರೇಲ್ ಸೋಮವಾರ ನಸುಕಿನಲ್ಲಿ ನಡೆಸಿದ ದಾಳಿಯಲ್ಲಿ ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ. ಏತನ್ಮಧ್ಯೆ ಸಂಘರ್ಷ ಶಮನದ ಸೂಚನೆಗಳು ಇಲ್ಲದ ಹಿನ್ನೆಲೆಯಲ್ಲಿ ತೈಲ ದರ ಏರಿಕೆ ಮುಂದುವರಿದಿದ್ದು, ಸೋಮವಾರ ಮುಂಜಾನೆ ಪ್ರತಿ ಬ್ಯಾರಲ್ ಕಚ್ಚಾ ತೈಲದ ದರ 0.44 ಶೇಕಡದಷ್ಟು ಹೆಚ್ಚಿ 100 ಡಾಲರ್ ದಾಟಿದೆ. ಶನಿವಾರ ಈ ದರ 98.66 ಡಾಲರ್ ಆಗಿತ್ತು.
ನಾರ್ಥ್ ಸೀ ಬ್ರೆಂಟ್ ಕ್ರೂಡ್ ದರ ಅಂದರೆ ಜಾಗತಿಕ ಬೆಂಚ್ಮಾರ್ಕ್ ಬೆಲೆ ಬ್ಯಾರಲ್ಗೆ 112.17 ಡಾಲರ್ ಆಗಿದೆ. ಫೆಬ್ರವರಿ 27ರ ವೇಳೆಗೆ ಇದು ಪ್ರತಿ ಬ್ಯಾರಲ್ಗೆ 72.48 ಡಾಳರ್ ಆಗಿತ್ತು.
ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಸೋಮವಾರ ಹೇಳಿಕೆ ನೀಡಿ, ಇರಾನ್ ಆಡಳಿತವನ್ನು ಟ್ರಂಪ್ ನಿಶ್ಶಕ್ತಗೊಳಿಸಿ, ಅಪಾಯಕಾರಿಯಲ್ಲದ ರೀತಿಯಲ್ಲಿ ಮಾಡುವುದರಿಂದ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವವನ್ನು ಸುರಕ್ಷಿತ ತಾಣವಾಗಿಸುವುದು ಟ್ರಂಪ್ ಗುರಿ ಎಂದು ಅವರು ವಿಶ್ಲೇಷಿಸಿದ್ದಾರೆ.







