ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ | ಕದನ ವಿರಾಮದ ಬಳಿಕ ಇಸ್ರೇಲ್ ಮೇಲೆ ಇರಾನ್ ನಿಂದ ಮೊದಲ ನೇರ ಕ್ಷಿಪಣಿ ದಾಳಿ

Photo credit : timesofindia
ಟೆಹರಾನ್, ಜೂ. 8: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಶಮನಗೊಳಿಸುವ ಉದ್ದೇಶದಿಂದ ಎಪ್ರಿಲ್ 8ರಂದು ಘೋಷಿಸಲಾದ ಪ್ರಾದೇಶಿಕ ಕದನ ವಿರಾಮದ ಬಳಿಕ ಮೊದಲ ಬಾರಿಗೆ ಇರಾನ್ ರವಿವಾರ ಇಸ್ರೇಲ್ ಮೇಲೆ ನೇರ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ನ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿಕೊಂಡು 11 ಕ್ಷಿಪಣಿಗಳನ್ನು ಉಡಾಯಿಸಲಾಗಿದ್ದು, ಇದರಿಂದ ಪ್ರದೇಶದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಿದೆ.
ಇರಾನ್ ಉಡಾಯಿಸಿದ ಎಲ್ಲ 11 ಕ್ಷಿಪಣಿಗಳನ್ನೂ ಯಶಸ್ವಿಯಾಗಿ ತಡೆದು ಛೇದಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ಹೇಳಿದೆ. ದಾಳಿಗೆ ಇರಾನ್ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಇಸ್ರೇಲ್, ಪ್ರಬಲ ಪ್ರತಿದಾಳಿ ಪ್ರಾರಂಭಿಸಿದೆ.
ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಯಾಲ್ ಝಮೀರ್, ‘ಕೂಡಲೇ ಬಲಿಷ್ಠ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.
ದಾಳಿಯ ಬಳಿಕ ಮುಂಜಾಗ್ರತಾ ಕ್ರಮವಾಗಿ ಇರಾನ್, ಇರಾಕ್ ಹಾಗೂ ಸಿರಿಯಾ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ವಾಯುಪ್ರದೇಶಗಳನ್ನು ತಾತ್ಕಾಲಿಕವಾಗಿ ಮುಚ್ಚಿವೆ. ಉತ್ತರ ಹಾಗೂ ಮಧ್ಯ ಇಸ್ರೇಲ್ನ ಹೈಫಾ, ಕೆಸೇರಾ ಮತ್ತು ಹಡೇರಾ ಸೇರಿದಂತೆ ಹಲವು ನಗರಗಳಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್ಗಳು ಮೊಳಗಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನಾಗರಿಕರಿಗೆ ಸೂಚಿಸಲಾಗಿದೆ.
ಇದೇ ವೇಳೆ, ಇರಾನ್ ವಿರುದ್ಧ ಪ್ರತಿದಾಳಿ ನಡೆಸದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮೇಲೆ ಒತ್ತಡ ಹೇರಲು ಮುಂದಾಗುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇಸ್ರೇಲ್ನ ಪ್ರತಿದಾಳಿ ಇರಾನ್–ಅಮೆರಿಕ ನಡುವಿನ ಒಪ್ಪಂದ ಪ್ರಯತ್ನಗಳಿಗೆ ಅಡ್ಡಿಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಉಭಯ ದೇಶಗಳು ಈಗಾಗಲೇ ಪರಸ್ಪರ ದಾಳಿಗಳಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಸಂಘರ್ಷ ಮತ್ತಷ್ಟು ಉಲ್ಬಣಿಸದಂತೆ ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಸಲಹೆ ನೀಡಿರುವುದಾಗಿ ಟ್ರಂಪ್ ಹೇಳಿದ್ದಾರೆ.
‘ಇಸ್ರೇಲ್ ದಾಳಿ ನಡೆಸಿದೆ. ಇರಾನ್ ಕೂಡ ದಾಳಿ ನಡೆಸಿದೆ. ಮತ್ತೊಂದು ದಾಳಿಯ ಅಗತ್ಯವಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ. ‘ಇರಾನ್ ಜತೆಗೆ ನಡೆಯುತ್ತಿರುವ ಒಪ್ಪಂದ ಮಾತುಕತೆ ಅಂತಿಮ ಹಂತದಲ್ಲಿದೆ. ಇದು ಉತ್ತಮ ಒಪ್ಪಂದವಾಗುವ ನಿರೀಕ್ಷೆಯಿದೆ. ಹೊಸ ದಾಳಿಯಿಂದಾಗಿ ಅದು ವಿಫಲವಾಗುವುದನ್ನು ನಾನು ಬಯಸುವುದಿಲ್ಲ’ ಎಂದೂ ಅವರು ತಿಳಿಸಿದ್ದಾರೆ.






