‘ಇರಾನ್ನ ಉಳಿದ ಭಾಗವನ್ನೂ ನಾಶಪಡಿಸಬೇಕಾಗಬಹುದು’: ಟ್ರಂಪ್ ಎಚ್ಚರಿಕೆ
‘ನಿಮಗೆ ಶೀಘ್ರದಲ್ಲೇ ತಿಳಿಯಲಿದೆ’ ಎಂದ ಅಮೆರಿಕ ಅಧ್ಯಕ್ಷ

Photo: PTI
ವಾಷಿಂಗ್ಟನ್: ಇರಾನ್ ವಿರುದ್ಧ ಮತ್ತೆ ಭಾರಿ ಪ್ರಮಾಣದ ದಾಳಿ ನಡೆಸುವ ಸುಳಿವು ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಗತ್ಯಬಿದ್ದರೆ ಆ ದೇಶದ ಉಳಿದ ಭಾಗವನ್ನೂ ನಾಶಪಡಿಸಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ. ಆದರೆ, ಸಾಧ್ಯವಾದಷ್ಟು ಹೆಚ್ಚಿನ ವಿನಾಶವನ್ನು ತಪ್ಪಿಸಲು ತಾವು ಬಯಸುವುದಾಗಿಯೂ ಹೇಳಿದ್ದಾರೆ.
ಗುರುವಾರ ಶ್ವೇತಭವನದ ಓವಲ್ ಆಫೀಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಸಾಧ್ಯವಾದರೆ ಇರಾನ್ ನ ಉಳಿದ ಭಾಗವನ್ನು ನಾಶಪಡಿಸಲು ನಾನು ಬಯಸುವುದಿಲ್ಲ. ಆದರೆ, ಬಹುಶಃ ಹಾಗೆ ಮಾಡಬೇಕಾಗಬಹುದು. ನಿಮಗೆ ಶೀಘ್ರದಲ್ಲೇ ತಿಳಿಯಲಿದೆ’ ಎಂದು ಹೇಳಿದ್ದಾರೆ.
ಇರಾನ್ ನ ಪರಮಾಣು ಕಾರ್ಯಕ್ರಮದ ವಿಚಾರದಲ್ಲಿಯೂ ಕಠಿಣ ನಿಲುವು ವ್ಯಕ್ತಪಡಿಸಿದ ಅವರು, ಅಮೆರಿಕದ ಅನುಮತಿಯಿಲ್ಲದೆ ಟೆಹ್ರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ‘ನಮ್ಮ ಅನುಮತಿಯಿಲ್ಲದೆ ಅವರು ಏನನ್ನೂ ಮಾಡುವಂತಿಲ್ಲ’ ಎಂದು ಹೇಳಿದರು.
ಚುನಾವಣಾ ಹಿನ್ನಡೆ; ಯುದ್ಧದ ಬಿಸಿ
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಹಿನ್ನಡೆ ಅನುಭವಿಸಿರುವ ಬೆನ್ನಲ್ಲೇ ಟ್ರಂಪ್ ಇರಾನ್ ವಿರುದ್ಧ ಹೊಸ ಎಚ್ಚರಿಕೆ ನೀಡಿದ್ದಾರೆ. ಎಂಟು ತಿಂಗಳಿನಿಂದ ಮುಂದುವರಿದಿರುವ ಇರಾನ್ ಯುದ್ಧದ ವಿಚಾರವಾಗಿ ಅವರು ತೀವ್ರ ರಾಜಕೀಯ ಒತ್ತಡ ಎದುರಿಸುತ್ತಿದ್ದಾರೆ.
ಯುದ್ಧದ ಬಗ್ಗೆ ಅಮೆರಿಕದ ಮತದಾರರಲ್ಲಿರುವ ಅಸಮಾಧಾನ ಮತ್ತು ಇಂಧನ ಬೆಲೆಗಳ ಏರಿಕೆಯು ಡೆಮಾಕ್ರಟಿಕ್ ಪಕ್ಷದ ಗೆಲುವಿಗೆ ಪ್ರಮುಖ ಕಾರಣಗಳಾಗಿವೆ ಎಂದು ವರದಿ ತಿಳಿಸಿದೆ.
ಚುನಾವಣೆಗೆ ಮುನ್ನವೂ ಟ್ರಂಪ್ ಇರಾನ್ ವಿರುದ್ಧ ಹಲವು ಬಾರಿ ಕಠಿಣ ಎಚ್ಚರಿಕೆ ನೀಡಿದ್ದರು. ಅಮೆರಿಕಕ್ಕೆ ಒಪ್ಪಿಗೆಯಾಗುವ ಷರತ್ತುಗಳ ಆಧಾರದಲ್ಲಿ ಒಪ್ಪಂದಕ್ಕೆ ಬರಲು ಟೆಹ್ರಾನ್ ವಿಫಲವಾದರೆ, ಮತ್ತೆ ದೊಡ್ಡ ಪ್ರಮಾಣದ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದರು.
ಈ ಸಂಘರ್ಷ ಇರಾನ್ ನ ಗಡಿಯನ್ನು ಮೀರಿ ವಿಸ್ತರಿಸಿದೆ. ಯೆಮನ್ ನ ಹೂತಿ ಬಂಡುಕೋರರ ದಾಳಿಗಳು ಹಾಗೂ ಪ್ರಾದೇಶಿಕ ಪಡೆಗಳ ಪ್ರತಿದಾಳಿಗಳಿಂದಾಗಿ ಕೆಂಪು ಸಮುದ್ರದಲ್ಲಿಯೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಖತರ್ ಮೂಲಕ ಇರಾನ್ ನ ಹೊಸ ಪ್ರಸ್ತಾವನೆ
ಯುದ್ಧದ ನಡುವೆ ರಾಜತಾಂತ್ರಿಕ ಮಾತುಕತೆಗೆ ಅವಕಾಶ ಕಲ್ಪಿಸುವ ಪ್ರಯತ್ನವೂ ನಡೆದಿದೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಖತರ್ ಮೂಲಕ ಅಮೆರಿಕಕ್ಕೆ ಹೊಸ ಪ್ರಸ್ತಾವನೆಯೊಂದನ್ನು ಕಳುಹಿಸಿದೆ ಎಂದು ವರದಿಯಾಗಿದೆ.
ಆದರೆ, ಮಾತುಕತೆ ಮುಂದುವರಿಯಬೇಕಾದರೆ ಅಮೆರಿಕ ತನ್ನ ಮೇಲಿನ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸಬೇಕು ಎಂದು ಟೆಹ್ರಾನ್ ಷರತ್ತು ವಿಧಿಸಿದೆ. ವಿದೇಶಗಳಲ್ಲಿ ಸ್ಥಗಿತಗೊಂಡಿರುವ ಇರಾನ್ ನ ಹಣಕಾಸು ಸ್ವತ್ತುಗಳನ್ನು ಬಿಡುಗಡೆ ಮಾಡಬೇಕು ಹಾಗೂ ಯುದ್ಧದಿಂದ ಉಂಟಾದ ನಷ್ಟಕ್ಕೆ ಪರಿಹಾರ ನೀಡಬೇಕು ಎಂಬ ಬೇಡಿಕೆಗಳನ್ನೂ ಮುಂದಿಟ್ಟಿದೆ.
ಇರಾನ್ ನ ಪ್ರಸ್ತಾವನೆಯನ್ನು ಅಮೆರಿಕ ಪರಿಶೀಲಿಸುತ್ತಿದೆ. ಆದರೆ, ಈ ನಡುವೆ ಟ್ರಂಪ್ ಮಿಲಿಟರಿ ಕ್ರಮದ ಆಯ್ಕೆಯನ್ನು ಕೈಬಿಟ್ಟಿಲ್ಲ. ಹೀಗಾಗಿ, ಮಾತುಕತೆ ಫಲ ನೀಡದಿದ್ದರೆ ಇರಾನ್ ವಿರುದ್ಧ ಮತ್ತೆ ದಾಳಿ ನಡೆಯುವ ಸಾಧ್ಯತೆಯೂ ಇದೆ.
ಹಾರ್ಮುಝ್ ಜಲಸಂಧಿಯ ಸುತ್ತಲೂ ಬಿಗುವಿನ ವಾತಾವರಣ
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಪರಿಣಾಮ ಹಾರ್ಮುಝ್ ಜಲಸಂಧಿಯ ಸುತ್ತಲೂ ಉದ್ವಿಗ್ನತೆ ಹೆಚ್ಚಾಗಿದೆ. ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಈ ಜಲಸಂಧಿಯ ಸುತ್ತಲಿನ ಬೆಳವಣಿಗೆಗಳು ಅಂತರರಾಷ್ಟ್ರೀಯ ಮಟ್ಟದಲ್ಲೂ ಆತಂಕ ಮೂಡಿಸಿವೆ.
ಒಂದೆಡೆ ಇರಾನ್ ನಿರ್ಬಂಧ ತೆರವು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಮಾತುಕತೆಗೆ ಸಿದ್ಧತೆ ತೋರಿದ್ದರೆ, ಮತ್ತೊಂದೆಡೆ ಟ್ರಂಪ್ ಆಡಳಿತ ಮಿಲಿಟರಿ ಕ್ರಮದ ಸಾಧ್ಯತೆಯನ್ನು ಮುಕ್ತವಾಗಿರಿಸಿದೆ. ಹೀಗಾಗಿ, ರಾಜತಾಂತ್ರಿಕ ಮಾತುಕತೆ ಸಂಘರ್ಷಕ್ಕೆ ತೆರೆ ಎಳೆಯುತ್ತದೆಯೇ ಅಥವಾ ಯುದ್ಧ ಮತ್ತಷ್ಟು ತೀವ್ರಗೊಳ್ಳುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.






