ಅಂತಿಮ ಒಪ್ಪಂದಕ್ಕೆ ಬರುವವರೆಗೂ ಅಮೆರಿಕದ ಮಿಲಿಟರಿ ಇರಾನ್ ಸುತ್ತಮುತ್ತ ಇರಲಿವೆ: ಡೊನಾಲ್ಡ್ ಟ್ರಂಪ್

Photo| PTI
ವಾಶಿಂಗ್ಟನ್: ಅಮೆರಿಕ-ಇರಾನ್ ಎರಡು ವಾರಗಳ ಕದನ ವಿರಾಮ ಘೋಷಿಸಿದೆ. ಈ ಮಧ್ಯೆ ಎರಡು ದೇಶಗಳು ಅಂತಿಮ ಒಪ್ಪಂದಕ್ಕೆ ಬರುವವರೆಗೂ ಅಮೆರಿಕಾ ಪಡೆಗಳು ಇರಾನ್ ಸುತ್ತಮುತ್ತ ಇರಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಕುರಿತು ಟ್ರೂತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಅಂತಿಮ ಒಪ್ಪಂದಕ್ಕೆ ಎರಡು ದೇಶಗಳು ತಲುಪುವವರೆಗೆ ಅಮೆರಿಕಾ ಪಡೆಗಳು ಇರಾನ್ ಸುತ್ತಮುತ್ತ ಇರಲವೆ ಎಂದು ಹೇಳಿದ್ದಾರೆ.
ಎಲ್ಲಾ ಅಮೆರಿಕಾ ನೌಕೆಗಳು, ವಿಮಾನಗಳು ಮತ್ತು ಸೈನಿಕರು, ಆಯುಧಗಳು ಈಗಾಗಲೇ ದುರ್ಬಲಗೊಂಡಿರುವ ಶತ್ರುವನ್ನು ಸಂಪೂರ್ಣವಾಗಿ ನಾಶಪಡಿಸುವ ಗುರಿಯೊಂದಿಗೆ ನಿಜವಾದ ಒಪ್ಪಂದ ಸಂಪೂರ್ಣವಾಗಿ ಪಾಲನೆಯಾಗುವವರೆಗೆ ಇರಾನ್ ಮತ್ತು ಅದರ ಸುತ್ತಮುತ್ತಲಲ್ಲಿ ಉಳಿಯಲಿವೆ ಎಂದು ಟ್ರಂಪ್ ಹೇಳಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ಟ್ರಂಪ್, ಹಾರ್ಮುಝ್ ಜಲಸಂಧಿ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಮತ್ತು ಕದನ ವಿರಾಮದ ಷರತ್ತುಗಳ ಭಾಗವಾಗಿ ದೇಶವು ಯಾವುದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ಭರವಸೆ ನೀಡಲಾಗಿತ್ತು ಎಂದು ಇರಾನ್ಗೆ ನೆನಪಿಸಿದ್ದಾರೆ. ಈ ಷರತ್ತುಗಳ ಉಲ್ಲಂಘನೆಯು ದೊಡ್ಡಮಟ್ಟದ ದಾಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
"ಯಾವುದೇ ಕಾರಣಕ್ಕೆ ಅಂತಿಮ ಒಪ್ಪಂದ ನಡೆಯದಿದ್ದರೆ, ಹೆಚ್ಚು ಅಸಂಭವವಾಗಿದ್ದರೆ ಗುಂಡಿನ ದಾಳಿ ಪ್ರಾರಂಭವಾಗುತ್ತದೆ. ಅದು ಯಾರೂ ಹಿಂದೆಂದೂ ನೋಡಿರದಷ್ಟು ದೊಡ್ಡಮಟ್ಟದಲ್ಲಿ ನಡೆಯಲಿದೆ" ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.






