‘ಉನ್ನತ ಅಧಿಕಾರಿಗಳ ಯೋಜಿತ ಹತ್ಯೆಗಳಿಂದ ಇರಾನ್ ಸರಕಾರಕ್ಕೆ ಹಿನ್ನಡೆಯಾಗದು’: ಸಚಿವ ಅಬ್ಬಾಸ್ ಅರಾಘ್ಚಿ

ಅಬ್ಬಾಸ್ ಅರಾಘ್ಚಿ | Photo Credit : AP
ಟೆಹರಾನ್,ಮಾ.18: ಭದ್ರತಾ ವರಿಷ್ಠ ಅಲಿ ಲಾರಿಜಾನಿ ಸೇರಿದಂತೆ ಉನ್ನತ ಅಧಿಕಾರಿಗಳ ಹತ್ಯೆಗಳಿಂದ ಇರಾನ್ ಸರಕಾರಕ್ಕೆ ಹಿನ್ನಡೆಯಾಗಲಾರದು ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. ಇರಾನ್ನ ಆಡಳಿತವು ಸಂಸ್ಥೆಗಳನ್ನು ಆಧರಿಸಿದೆಯೇ ಹೊರತು ಯಾವುದೇ ವ್ಯಕ್ತಿಗಳನ್ನಲ್ಲ. ಅಮೆರಿಕ ಹಾಗೂ ಇಸ್ರೇಲ್ನ ದಾಳಿಗಳು, ಇರಾನ್ ನ ಆಡಳಿತ ವ್ಯವಸ್ಥೆಯನ್ನು ಅಲುಗಾಡಿಸಲಾರದು. ದೇಶದ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಾಮಿನೈ ಅವರ ಹತ್ಯೆಯ ಹೊರತಾಗಿಯೂ ಇರಾನ್ ಆಡಳಿತದ ಕಾರ್ಯನಿರ್ವಹಣೆ ಯಥಾಪ್ರಕಾರ ಮುಂದುವರಿದಿದೆಯೆಂದು ಅವರು ಹೇಳಿದ್ದಾರೆ.
ಇರಾನ್ನ ಹಿರಿಯ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಹಾಗೂ ಬಸ್ಜಿ ಸ್ವಯಂಸೇವಕಪಡೆಯ ವರಿಷ್ಠ ಗುಲಾಮ್ರೆಝಾ ಸೊಲೈಮನಿ ಅವರು ಇಸ್ರೇಲ್ ದಾಳಿಯಲ್ಲಿ ಹತ್ಯೆಯಾದ ಬೆನ್ನಲ್ಲೇ ಅಬ್ಬಾಸ್ ಅರಾಘ್ಚಿ ಈ ಹೇಳಿಕೆ ನೀಡಿದ್ದಾರೆ.
‘‘ ಇಸ್ಲಾಮಿಕ್ ಗಣರಾಜ್ಯವು ಸ್ಥಾಪಿತವಾದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸಂಸ್ಥಾಪನೆಗಳನ್ನೊಳಗೊಂಡ ಬಲವಾದ ರಾಜಕೀಯ ಸಂರಚನೆ ಹೊಂದಿದೆ ಯಾವುದೇ ವ್ಯಕ್ತಿಯ ಅನುಪಸ್ಥಿತಿಯು ಈ ಸಂರಚನೆಯ ಮೇಲೆ ಪ್ರಭಾವ ಬೀರುವುದಿಲ್ಲವೆಂದು ಅವರು ಹೇಳಿದ್ದಾರೆ.
ನಮಗೆ ಸರ್ವೋಚ್ಚ ನಾಯಕನಿಗಿಂತ ಬಹುಮುಖ್ಯವಾದ ವ್ಯಕ್ತಿ ಮತ್ತೊಬ್ಬರಿಲ್ಲ. ಒಂದು ವೇಳೆ ಸರ್ವೋಚ್ಚ ನಾಯಕ ಹುತಾತ್ಮನಾದರೂ ವ್ಯವಸ್ಥೆಯು ಅದರ ಕೆಲಸವನ್ನು ಮುಂದುವರಿಸುತ್ತದೆ ಹಾಗೂ ಮಂದಿನ ನಾಯಕನ ಆಯ್ಕೆಗೆ ಅವಕಾಶ ಮಾಡಿಕೊಡುತ್ತದೆ ಎಂದು ಅರಾಘ್ಚಿ ತಿಳಿಸಿದರು.







