ಎಪ್ಸ್ಟೀನ್ ಫೈಲ್ಸ್ನಲ್ಲಿ ಮೀರಾ ನಾಯರ್ ಹೆಸರು: ವರದಿ

ಮೀರಾ ನಾಯರ್ | Photo Credit : X \ @AlwaysBollywood
ವಾಷಿಂಗ್ಟನ್: ಅಮೆರಿಕ ನ್ಯಾಯ ಇಲಾಖೆ ಹೊಸದಾಗಿ ಬಹಿರಂಗಗೊಳಿಸಿರುವ ಜೆಫ್ರಿ ಎಪ್ಸ್ಟೀನ್ಗೆ ಸಂಬಂಧಿಸಿದ ದಾಖಲೆಗಳಲ್ಲಿ ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಅವರ ತಾಯಿ, ಭಾರತೀಯ-ಅಮೇರಿಕನ್ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಅವರ ಹೆಸರು ಕಾಣಿಸಿಕೊಂಡಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಘಿಸ್ಲೇನ್ ಮ್ಯಾಕ್ಸ್ವೆಲ್ಗೆ ಸಂಬಂಧಿಸಿದ 2009ರ ಸಾಮಾಜಿಕ ಕಾರ್ಯಕ್ರಮದ ಕುರಿತ ಇಮೇಲ್ನಲ್ಲಿ ಮೀರಾ ನಾಯರ್ ಅವರ ಹೆಸರು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ಗೆ ಸಂಬಂಧಿಸಿದ ತನಿಖಾ ಸಂಗತಿಗಳು ಸಾರ್ವಜನಿಕವಾಗಿ ಭಾರಿ ಪ್ರಮಾಣದಲ್ಲಿ ಬಹಿರಂಗವಾಗುತ್ತಿರುವ ಭಾಗವಾಗಿ ಈ ದಾಖಲೆಗಳು ಹೊರ ಬಿದ್ದಿವೆ. ಎಪ್ಸ್ಟೀನ್ ಹಾಗೂ ಆತನ ಜಾಲದ ಕುರಿತು ಪಾರದರ್ಶಕ ಕಾಯ್ದೆಯಡಿ ಸರಕಾರ ಬಹಿರಂಗಪಡಿಸಬೇಕಿದ್ದು, ಮೂರು ದಶಲಕ್ಷಕ್ಕೂ ಹೆಚ್ಚು ಪುಟಗಳ ದಾಖಲೆಗಳು, ಅದರೊಂದಿಗೆ ಸಾವಿರಾರು ವಿಡಿಯೊ ಮತ್ತು ಭಾವಚಿತ್ರಗಳನ್ನು ಈವರೆಗೆ ಸಾರ್ವಜನಿಕಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದಿನ ದಾಖಲೆ ಬಹಿರಂಗಗಳು ಅಪೂರ್ಣ ಎಂಬ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಈ ಹೊಸ ದಾಖಲೆಗಳನ್ನು ಬಹಿರಂಗಗೊಳಿಸಲಾಗಿದೆ.
2009 ರಲ್ಲಿ ಗಿಸ್ಲೇನ್ ಮ್ಯಾಕ್ಸ್ವೆಲ್ ಅವರ ಮನೆಯಲ್ಲಿ ಆಯೋಜಿಸಲಾಗಿದ್ದ ಸಿನಿಮಾ ಪಾರ್ಟಿಯಲ್ಲಿ ಖ್ಯಾತ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಅತಿಥಿಯಾಗಿ ಭಾಗವಹಿಸಿದ್ದರು ಎಂದು ಉಲ್ಲೇಖಿಸಲಾಗಿದೆ, ಇದರಲ್ಲಿ ಬಿಲ್ ಕ್ಲಿಂಟನ್ ಮತ್ತು ಜೆಫ್ ಬೆಜೋಸ್ ಕೂಡ ಭಾಗವಹಿಸಿದ್ದರು. ಪ್ರಚಾರಕಿ ಪೆಗ್ಗಿ ಸೀಗಲ್ ಎಪ್ಸ್ಟೀನ್ಗೆ ಕಳುಹಿಸಿರುವ ಇಮೇಲ್ ಪ್ರಕಾರ, ಈ ಕಾರ್ಯಕ್ರಮವು ಮೀರಾ ನಾಯರ್ ಅವರ ಚಲನಚಿತ್ರ ಅಮೆಲಿಯಾ ನಂತರದ ಪಾರ್ಟಿಯಾಗಿತ್ತು.





