ತೈವಾನ್ ಸಮಸ್ಯೆ ಸಮರ್ಪಕವಾಗಿ ನಿರ್ವಹಿಸದಿದ್ದರೆ ಅಮೆರಿಕ-ಚೀನಾ ಸಂಬಂಧ ಅಪಾಯಕಾರಿ ಹಂತಕ್ಕೆ ತಳ್ಳಲ್ಪಡಬಹುದು: ಟ್ರಂಪ್ಗೆ ಕ್ಸಿ ಜಿನ್ಪಿಂಗ್ ಎಚ್ಚರಿಕೆ

Photo | X
ಬೀಜಿಂಗ್: ತೈವಾನ್ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅಮೆರಿಕ-ಚೀನಾ ನಡುವಿನ ಸಂಬಂಧ ಅಪಾಯಕಾರಿ ಹಂತಕ್ಕೆ ತಳ್ಳಲ್ಪಡಬಹುದು. ಎರಡೂ ದೇಶಗಳ ನಡುವೆ ಘರ್ಷಣೆಗೆ ಕಾರಣವಾಗಬಹುದು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ತಿಳಿಸಿದ್ದಾರೆ ಎಂದು ಚೀನಾದ ರಾಜ್ಯ ಮಾಧ್ಯಮ Xinhua news agency ವರದಿ ಮಾಡಿದೆ.
ಶೃಂಗಸಭೆಗಾಗಿ ಬೀಜಿಂಗ್ಗೆ ಡೊನಾಲ್ಡ್ ಟ್ರಂಪ್ ತೆರಳಿದ್ದಾರೆ. 9 ವರ್ಷಗಳ ನಂತರ ಇದೇ ಮೊದಲ ಬಾರಿ ಟ್ರಂಪ್ ಚೀನಾಕ್ಕೆ ಭೇಟಿ ನೀಡಿದ್ದಾರೆ.
"ಟ್ರಂಪ್ ಜೊತೆಗಿನ ಸಭೆಯಲ್ಲಿ ತೈವಾನ್ ವಿಷಯವು ಚೀನಾ-ಯುಎಸ್ ಸಂಬಂಧಗಳಲ್ಲಿ ಅತ್ಯಂತ ಪ್ರಮುಖ ವಿಷಯವಾಗಿದೆ. ಈ ವಿಷಯವನ್ನು ಎಚ್ಚರಿಕೆಯಿಂದ ನಿರ್ವಹಿಸುವಲ್ಲಿ ವಿಫಲವಾದರೆ ಎರಡು ದೇಶಗಳ ನಡುವೆ ನೇರ ಘರ್ಷಣೆಗೆ ಕಾರಣವಾಗಬಹುದು" ಎಂದು ಚೀನಾದ ಸರಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತೈವಾನ್ ಅನ್ನು ಚೀನಾ ತನ್ನ ದೇಶದ ಭಾಗವೆಂದು ಪರಿಗಣಿಸುತ್ತದೆ. ಆ ದ್ವೀಪವು ತನ್ನ ಭೂಭಾಗದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳುತ್ತದೆ. ಭವಿಷ್ಯದಲ್ಲಿ ಪುನರ್ ಏಕೀಕರಣ ಸಾಧಿಸುವುದಾಗಿ ಚೀನಾ ಪ್ರತಿಜ್ಞೆ ಮಾಡಿದೆ.




