ರಶ್ಯ ಪ್ರಧಾನಿಯಾಗಿ ಮಿಶುಸ್ಟಿನ್ ಮರುನೇಮಕ
PC : X/@Surender_10K
ಮಾಸ್ಕೋ: ರಶ್ಯದ ಪ್ರಧಾನಿಯನ್ನಾಗಿ ಮಿಖಾಯಿಲ್ ಮಿಶುಸ್ಟಿನ್ರನ್ನು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮರುನೇಮಕಗೊಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಳೆದ 4 ವರ್ಷಗಳಿಂದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ ಮಿಶುಸ್ಟಿನ್, ಅಧ್ಯಕ್ಷರಾಗಿ ಪುಟಿನ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಸಚಿವ ಸಂಪುಟದ ರಾಜೀನಾಮೆಯನ್ನು ಅಧ್ಯಕ್ಷರಿಗೆ ಸಲ್ಲಿಸಿದ್ದರು. ರಶ್ಯದಲ್ಲಿ ಆಡಳಿತಾತ್ಮಕ ಅಧಿಕಾರಿ ಅಧ್ಯಕ್ಷರ ಕೈಯಲ್ಲೇ ಕೇಂದ್ರೀಕೃತವಾಗಿರುವುದರಿಂದ ಪ್ರಧಾನಿಗೆ ಹೆಚ್ಚಿನ ಅಧಿಕಾರ ಇರುವುದಿಲ್ಲ.
ಪುಟಿನ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಮಿಶುಸ್ಟಿನ್ರನ್ನು ಪ್ರಧಾನಿಯಾಗಿ ಮುಂದುವರಿಸುವ ನಿರ್ಧಾರವನ್ನು ಪುಟಿನ್ ರಶ್ಯದ ಸಂಸತ್ನಲ್ಲಿ ಮಂಡಿಸಿದ್ದು ಪುಟಿನ್ ಪಕ್ಷ ಬಹುಮತ ಹೊಂದಿರುವ ಸಂಸತ್ನಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ದೊರಕುವುದು ಖಚಿತವಾಗಿದೆ ಎಂದು ಸಂಸತ್ನ ಕೆಳಮನೆಯ ಸ್ಪೀಕರ್ ವ್ಯಾಚೆಸ್ಲಾವ್ ವೊಲೊದಿನ್ ಘೋಷಿಸಿದ್ದಾರೆ. ಮಿಶುಸ್ಟಿನ್ ಜತೆಗೆ ಅವರ ಸಂಪುಟದ ಬಹುತೇಕ ಸಚಿವರೂ ಮರು ನೇಮಕಗೊಳ್ಳುವ ನಿರೀಕ್ಷೆಯಿದೆ.
ಆದರೆ ರಕ್ಷಣಾ ಸಚಿವ ಸೆರ್ಗೆಯ್ ಶೊಯಿಗು ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಕಳೆದ ತಿಂಗಳು ಉಪರಕ್ಷಣಾ ಸಚಿವ , ಶೊಯಿಗು ಅವರ ಆಪ್ತರಾಗಿದ್ದ ಟಿಮುರ್ ಇವನೋವ್ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವುದರಿಂದ ಶೊಯಿಗು ಪದಚ್ಯುತಿಗೆ ಆಗ್ರಹ ಹೆಚ್ಚಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.