ಮೋದಿ-ಪುಟಿನ್ ದೂರವಾಣಿ ಮಾತುಕತೆ: ಉಕ್ರೇನ್ ಬಿಕ್ಕಟ್ಟು, ವ್ಯಾಗ್ನರ್ ದಂಗೆ ಬಗ್ಗೆ ಉಭಯ ನಾಯಕರ ಚರ್ಚೆ

ಫೋಟೋ: PTI
ಮಾಸ್ಕೊ: ಪ್ರಧಾನಿ ನರೇಂದ್ರ ಮೋದಿ ಹಾಗೂ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಶುಕ್ರವಾರ ದೂರವಾಣಿ ಮಾತುಕತೆ ನಡೆಸಿದ್ದು ಉಕ್ರೇನ್ ಬಿಕ್ಕಟ್ಟು ಹಾಗೂ ರಶ್ಯನ್ ಖಾಸಗಿ ಸೇನೆ ‘ವ್ಯಾಗ್ನರ್’ನ ದಂಗೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
ಕಳೆದ ಶನಿವಾರ ಖಾಸಗಿ ಸೇನೆ‘ವ್ಯಾಗ್ನರ್’ದಂಗೆಯನ್ನು ನಿಭಾಯಿಸುವಲ್ಲಿ ರಶ್ಯನ್ ನಾಯಕತ್ವ ಕೈಗೊಂಡ ನಿರ್ಣಾಯಕ ಕ್ರಮಗಳಿಗೆ ಪ್ರಧಾನಿ ಮೋದಿ ಬೆಂಬಲ ವ್ಯಕ್ತಪಡಿಸಿದರೆಂದು ಕ್ರೆಮ್ಲಿನ್ ಮೂಲಗಳು ತಿಳಿಸಿವೆ.
ಉಭಯದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರದಲ್ಲಿನ ಪ್ರಗತಿ ಹಾಗೂ ಆ ದೇಶದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು, ಸ್ಥಿರತೆಯನ್ನು ಖಾತರಿಪಡಿಸಲು ಹಾಗೂ ತನ್ನ ನಾಗರಿಕರ ಸುರಕ್ಷತೆಗಾಗಿ ರಶ್ಯನ್ ನಾಯಕತ್ವ ಕೈಗೊಂಡ ನಿರ್ಣಾಯಕ ಕ್ರಮಗಳ ಬಗ್ಗೆ ನರೇಂದ್ರಮೋದಿ ಅವರು ಸಹಮತ ಹಾಗೂ ಬೆಂಬಲವನ್ನು ವ್ಯಕ್ತಪಡಿಸಿದರೆಂದು ವರದಿ ಹೇಳಿದೆ.
ಉಭಯದೇಶಗಳ ದ್ವಿಪಕ್ಷೀಯ ಸಹಕಾರದಲ್ಲಿನ ಪ್ರಗತಿಯನ್ನು ಇಬ್ಬರೂ ನಾಯಕರು ಮಾತುಕತೆ ವೇಳೆ ಪರಾಮರ್ಶಿಸಿದರು ಹಾಗೂ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ರಶ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ಪುಟಿನ್ ಅವರು ಮೋದಿಗೆ ಮಾಹಿತಿ ನೀಡಿದ್ದಾರೆ ಎಂದು
‘‘ ಉಕ್ರೇನ್ ಪರಿಸ್ಥಿತಿ ಬಗ್ಗೆ ಚರ್ಚಿಸುವಾಗ ಪ್ರಧಾನಿಯವರು ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಬಿಕ್ಕಟ್ಟು ಬಗೆಹರಿಸುವಂತೆ ಸಲಹೆ ಮಾಡಿದರು.
ಶಾಂಘೈ ಸಹಕಾರ ಸಂಘಟನೆ (ಎಸ್ಸಿಓ) ಹಾಗೂ ಜಿ20 ವ್ಯಾಪ್ತಿಯೊಳಗೆ ಉಭಯದೇಶಗಳ ಸಹಕಾರದ ಬಗ್ಗೆಯೂ ಇಬ್ಬರೂ ಚರ್ಚಿಸಿರುವುದಾಗಿ ಹೇಳಿಕೆ ತಿಳಿಸಿದೆ.