ಪತ್ರಕರ್ತ ಖಶೋಗಿ ಹತ್ಯೆಯ ಬಗ್ಗೆ ಸೌದಿ ರಾಜಕುಮಾರನಿಗೆ ತಿಳಿದಿರಲಿಲ್ಲ: ಟ್ರಂಪ್

Photo credit: PTI
ವಾಷಿಂಗ್ಟನ್, ನ.19: ವಾಷಿಂಗ್ಟನ್ ಪೋಸ್ಟ್ ನ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಬಗ್ಗೆ ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಗೆ ಏನೂ ತಿಳಿದಿರಲಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಏಳು ವರ್ಷಗಳ ಬಳಿಕ ಅಮೆರಿಕಾಕ್ಕೆ ಭೇಟಿ ನೀಡಿರುವ ಸೌದಿ ರಾಜಕುಮಾರರೊಂದಿಗೆ ಶ್ವೇತಭವನದಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ` ಮುಹಮ್ಮದ್ ಬಿನ್ ಸಲ್ಮಾನ್ ಅದ್ಭುತ ಮಾನವ ಹಕ್ಕುಗಳ ದಾಖಲೆಯನ್ನು ಹೊಂದಿದ್ದಾರೆ. 2018ರಲ್ಲಿ ನಡೆದ ಖಶ್ಶೋಗಿ ಹತ್ಯೆಯ ಬಗ್ಗೆ ಅವರಿಗೆ ಏನೂ ತಿಳಿದಿರಲಿಲ್ಲ. ಘಟನೆ ನಡೆದು ಹೋಯಿತು. ಮೃತ ಪತ್ರಕರ್ತ `ಅತ್ಯಂತ ವಿವಾದಾತ್ಮಕ'ವಾಗಿದ್ದರು' ಎಂದು ಪ್ರತಿಕ್ರಿಯಿಸಿದರು. ಹತ್ಯೆಯ ಬಗ್ಗೆ ಸೌದಿ ರಾಜಕುಮಾರನಿಗೆ ಪ್ರಶ್ನಿಸಿ ಮುಜುಗುರಕ್ಕೀಡು ಮಾಡಬೇಡಿ' ಎಂದು ಪತ್ರಕರ್ತೆಯ ಮೇಲೆ ರೇಗಿದರು.
ಟರ್ಕಿಯಲ್ಲಿ ಸೌದಿ ಕಾನ್ಸುಲೇಟ್ ಕಚೇರಿಯೊಳಗಡೆ ನಡೆದ ಖಶ್ಶೋಗಿ ಹತ್ಯೆ ಒಂದು ದೊಡ್ಡ ಪ್ರಮಾದವಾಗಿದೆ. ಇದನ್ನು ಸಂಪೂರ್ಣವಾಗಿ ತನಿಖೆ ನಡೆಸಲಾಗಿದೆ ಎಂದು ಮುಹಮ್ಮದ್ ಬಿನ್ ಸಲ್ಮಾನ್ ಪ್ರತಿಕ್ರಿಯಿಸಿದ್ದಾರೆ.
ಹತ್ಯೆಯ ಬಗ್ಗೆ ತನಿಖೆ ನಡೆಸಿದ್ದ ಅಮೆರಿಕಾದ ಸಿಐಎ `ಹತ್ಯೆ ಕಾರ್ಯಾಚರಣೆಯನ್ನು ರಾಜಕುಮಾರ ಅನುಮೋದಿಸಿದ್ದರು' ಎಂದು ತೀರ್ಮಾನಿಸಿದೆ. ಆದರೆ ದಾಳಿಯ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಸಲ್ಮಾನ್ ಪ್ರತಿಪಾದಿಸಿದ್ದಾರೆ.





