ಪುತ್ರನ ವಿದೇಶ ಪ್ರವಾಸದ ಫೋಟೋಗಳು ವೈರಲ್ ಬೆನ್ನಲ್ಲೇ ವ್ಯಾಪಕ ಪ್ರತಿಭಟನೆ: ಮಂಗೋಲಿಯಾ ಪ್ರಧಾನಿ ಒಯುನ್ ಎರ್ಡೆನೆ ರಾಜೀನಾಮೆ

ಮಂಗೋಲಿಯಾ ಪ್ರಧಾನಿ ಲುವ್ಸನ್ನಾಮಸ್ರೈನ್ ಒಯುನ್ ಎರ್ಡೆನೆ (Photo credit: X/@DuffyUnfiltered)
ಮಂಗೋಲಿಯಾ: ಮಂಗೋಲಿಯಾ ಪ್ರಧಾನಿ ಲುವ್ಸನ್ನಾಮಸ್ರೈನ್ ಒಯುನ್ ಎರ್ಡೆನೆ ರಾಜೀನಾಮೆ ನೀಡಿದ್ದಾರೆ. ಎರ್ಡೆನೆ ಪುತ್ರನ ವಿದೇಶಿ ಪ್ರವಾಸದ ಫೋಟೊ ವೈರಲ್ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ವಿದೇಶ ಪ್ರವಾಸದ ವೇಳೆ ಒಯುನ್-ಎರ್ಡೆನೆ ಅವರ ಪುತ್ರ ಹಾಗೂ ಅವರ ಭಾವಿ ಪತ್ನಿ ಐಶಾರಾಮಿ ಬ್ಲ್ಯಾಕ್ ಡಿಯೋರ್ ಬ್ಯಾಗ್ ಸೇರಿದಂತೆ ದುಬಾರಿ ವಸ್ತುಗಳನ್ನು ಹಿಡಿದುಕೊಂಡಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಧಾನಿಯ ಪುತ್ರ ʼಹುಟ್ಟುಹಬ್ಬದ ಶುಭಾಶಯಗಳುʼ ಎಂಬ ಶೀರ್ಷಿಕೆಯಲ್ಲಿ ಒಂದು ಫೋಟೊ ಪೋಸ್ಟ್ ಮಾಡಿದ್ದಾರೆ. ಇನ್ನೊಂದು ಫೋಟೊದಲ್ಲಿ ಜೋಡಿ ಈಜುಕೊಳದಲ್ಲಿ ಇರುವುದು ಕಂಡು ಬಂದಿದೆ.
ಫೋಟೋಗಳಲ್ಲಿನ ಐಶಾರಾಮಿ ವಸ್ತುಗಳ ಬಗ್ಗೆ ಭ್ರಷ್ಟಾಚಾರ ವಿರೋಧಿ ಸಂಸ್ಥೆ ತನಿಖೆ ನಡೆಸುತ್ತಿದೆ.
ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿರುವಾಗ ಪ್ರಧಾನಿ ಕುಟುಂಬ ಹೇಗೆ ಇಂತಹ ಐಶಾರಾಮಿ ಜೀವನ ನಡೆಸಲು ಸಾಧ್ಯ ಎಂದು ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಸುಮಾರು ಎರಡು ವಾರಗಳ ಕಾಲ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದ್ದರು.
ಓಯುನ್-ಎರ್ಡೆನೆ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದ್ದ ಮಧ್ಯೆ ಮಂಗಳವಾರ ಸಂಸತ್ತಿನಲ್ಲಿ ನಡೆದ ವಿಶ್ವಾಸ ಮತಯಾಚನೆಯಲ್ಲಿ ಅವರು ಸೋಲನುಭವಿಸಿದ್ದರು.







