ಸುಡಾನ್ ನಲ್ಲಿ ಭಾರೀ ಭೂಕುಸಿತ: 1,000ಕ್ಕೂ ಅಧಿಕ ಮಂದಿ ಮೃತ್ಯು

Photo:X/@nexta_tv
ಡಾರ್ಫುರ್ (ಸುಡಾನ್): ಸುಡಾನ್ ನ ಪೂರ್ವ ಡಾರ್ಫುರ್ ಪ್ರಾಂತ್ಯದಲ್ಲಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಆ ಪ್ರಾಂತ್ಯವನ್ನು ನಿಯಂತ್ರಿಸುತ್ತಿರುವ ಬಂಡುಕೋರ ಗುಂಪು ಹೇಳಿದೆ ಎಂದು AFP ಸುದ್ದಿ ಸಂಸ್ಥೆ ತಿಳಿಸಿದೆ.
ಈ ಭೂಕುಸಿತದಲ್ಲಿ ಇಡೀ ಗುಡ್ಡಗಾಡು ಗ್ರಾಮ ನೆಲಸಮವಾಗಿದ್ದು, ಕೇವಲ ಓರ್ವ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ ಎಂದು ಬಂಡುಕೋರರ ಗುಂಪು ತಿಳಿಸಿದೆ.
ಹಲವು ದಿನಗಳ ಭಾರಿ ಮಳೆಯ ನಂತರ ಈ ದುರಂತ ಸಂಭವಿಸಿದ್ದು, ಮಾರ್ರಾ ಗುಡ್ಡುಗಾಡು ಪ್ರದೇಶದ ತರಾಸಿನ್ ಗ್ರಾಮ ಸಂಪೂರ್ಣವಾಗಿ ನೆಲಸಮವಾಗಿದೆ ಎಂದು ಸುಡಾನ್ ಲಿಬರೇಷನ್ ಮೂವ್ ಮೆಂಟ್ ಪ್ರಕಟನೆಯಲ್ಲಿ ತಿಳಿಸಿದೆ.
“ಪ್ರಾಥಮಿಕ ವರದಿಗಳ ಪ್ರಕಾರ, ಎಲ್ಲ ಗ್ರಾಮಸ್ಥರೂ ಮೃತಪಟ್ಟಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದ್ದು, 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಘಟನೆಯಲ್ಲಿ ಕೇವಲ ಓರ್ವ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ” ಎಂದು ಬಂಡುಕೋರರ ಗುಂಪು ಹೇಳಿದೆ.
ಈ ಭಾರಿ ಹಾಗೂ ಅನಾಹುತಕಾರಿ ಭೂಕುಸಿತವು ನಿಂಬೆಗೆ ಹೆಸರುವಾಸಿಯಾದ ಈ ಪ್ರಾಂತ್ಯದ ಇಡೀ ಭಾಗವನ್ನು ನಾಶಗೊಳಿಸಿದೆ ಎಂದೂ ಅದು ತಿಳಿಸಿದೆ.
ಅವಶೇಷಗಳಡಿ ಸಿಲುಕಿಕೊಂಡಿರುವ ಮೃತದೇಹಗಳನ್ನು ಹೊರ ತೆಗೆಯಲು ವಿಶ್ವ ಸಂಸ್ಥೆ ಹಾಗೂ ಇನ್ನಿತರ ನೆರವು ಸಂಘಟನೆಗಳ ಸಹಾಯಕ್ಕಾಗಿ ಬಂಡುಕೋರರ ಗುಂಪು ಮನವಿ ಮಾಡಿದೆ.







