ಖಾಮಿನೈ ಹತ್ಯೆಗೈದ ಕಾರ್ಯಾಚರಣೆಯ ರೂವಾರಿ ಮೊಸಾದ್ ಏಜೆಂಟ್ ಮೃತ್ಯು

pc : timesofisrael
ಟೆಲ್ ಅವೀವ್, ಎ.22: ಇರಾನ್ ವಿರುದ್ಧ ಇಸ್ರೇಲ್ ನಡೆಸಿದ್ದ ‘ಆಪರೇಷನ್ ರೋರಿಂಗ್ ಲಯನ್’ ಕಾರ್ಯಾಚರಣೆಯ ರೂವಾರಿ, ಇಸ್ರೇಲ್ ನ ಗುಪ್ತಚರ ಏಜೆನ್ಸಿ ಮೊಸಾದ್ನ ಏಜೆಂಟ್ ದೇಶದ ಹೊರಗೆ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಹತರಾಗಿದ್ದಾರೆ ಎಂದು ವರದಿಯಾಗಿದೆ.
ಈ ‘ಆಪರೇಷನ್ ರೋರಿಂಗ್ ಲಯನ್’ ಕಾರ್ಯಾಚರಣೆಯಲ್ಲಿ ಇರಾನ್ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತರಾಗಿದ್ದರು. ಹತ್ಯೆಯಾದ ಹಿರಿಯ ಏಜೆಂಟ್ ನ ಹೆಸರನ್ನು ಮೊಸಾದ್ ಬಹಿರಂಗಪಡಿಸಿಲ್ಲ, ಆದರೆ ಸಂತಾಪ ಸಂದೇಶದಲ್ಲಿ ‘ಎಂ’ ಎಂದು ಉಲ್ಲೇಖಿಸಲಾಗಿದೆ. ‘ಎಂ’ ಅವರು ಸೂಕ್ಷ್ಮತೆ, ತಂತ್ರಗಾರಿಕೆ ಮತ್ತು ಸುಧಾರಿತ ತಂತ್ರಜ್ಞಾನವನ್ನು ಬಳಸಿದ ಸಂಕೀರ್ಣ ಕಾರ್ಯಾಚರಣೆಗಳ ಮೂಲಕ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದು ಮೊಸಾದ್ ಮುಖ್ಯಸ್ಥ ಡೇವಿಡ್ ಬರ್ನಿಯ ಹೇಳಿದ್ದಾರೆ.
ಆದರೆ ‘ಎಂ’ ಎಂಬ ಸಂಕೇತನಾಮ ಹೊಂದಿದ್ದ ಮೊಸಾದ್ ಸದಸ್ಯನ ಪೂರ್ಣ ಹೆಸರು ಎರೆಝ್ ಶಿಮೋನಿ ಎಂದು ತಿಳಿದುಬಂದಿದೆ. ಈತ 2023ರ ಮೇ 31ರಂದು ಉತ್ತರ ಇಟಲಿಯಲ್ಲಿ ನಡೆದ ದೋಣಿ ದುರಂತದಲ್ಲಿ ಸಾವನ್ನಪ್ಪಿದ್ದರು. ಇದು ಆಕಸ್ಮಿಕ ದುರಂತವೇ ಅಥವಾ ಹತ್ಯೆ ಕಾರ್ಯಾಚರಣೆಯ ಭಾಗವೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಇಸ್ರೇಲ್ ನ ಚಾನೆಲ್ 12 ಸುದ್ದಿಸಂಸ್ಥೆ ವರದಿ ಮಾಡಿದೆ. ಖಾಮಿನೈ ಹತ್ಯೆಗೆ ಇಸ್ರೇಲ್ ದಶಕಗಳಿಂದಲೂ ಯೋಜನೆ ರೂಪಿಸುತ್ತಿತ್ತು ಮತ್ತು ಇದರಲ್ಲಿ 50 ವರ್ಷದ ಶಿಮೋನಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ವರದಿ ಹೇಳಿದೆ.






