ಹೆಚ್ಚಿದ ಒತ್ತಡ : ಪದತ್ಯಾಗಕ್ಕೆ ಮುಂದಾದ ಬ್ರಿಟನ್ ಪ್ರಧಾನಿ

ಕೀರ್ ಸ್ಟಾರ್ಮರ್ | Photo Credit : AP , PTI
ಲಂಡನ್: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಸ್ವಪಕ್ಷೀಯರಿಂದಲೇ ರಾಜೀನಾಮೆಗೆ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಪದತ್ಯಾಗಕ್ಕೆ ಮುಂದಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ಬಹಿರಂಗಪಡಿಸಿವೆ.
ಪ್ರಧಾನಿ ಪದತ್ಯಾಗಕ್ಕೆ ಮುಂದಾಗಿದ್ದಾರೆ. ಆದರೆ, ಅವರದ್ದೇ ಕೆಲ ಷರತ್ತುಗಳ ಆಧಾರದಲ್ಲಿ ಹುದ್ದೆ ತ್ಯಜಿಸಲಿದ್ದಾರೆ ಎಂದು ಸಂಪುಟ ಸಹೋದ್ಯೋಗಿಯ ಹೇಳಿಕೆಯನ್ನು ಉಲ್ಲೇಖಿಸಿ ಡೈಲಿ ಮೇಲ್ ಯುಕೆ ವರದಿ ಮಾಡಿದೆ.
"ಪ್ರಸ್ತುತ ರಾಜಕೀಯ ಪ್ರಕ್ಷುಬ್ಧತೆಯನ್ನು ಅರಗಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಅವರಿಗೆ ಮನವರಿಕೆಯಾಗಿದೆ. ಆದರೆ, ತಮ್ಮದೇ ಆಯ್ಕೆಯ ಗೌರವಯುತ ಮಾರ್ಗದಲ್ಲಿ ಪದತ್ಯಾಗ ಮಾಡಲು ಅವರು ಬಯಸಿದ್ದಾರೆ. ಅವರು ಇದಕ್ಕೆ ಅಗತ್ಯ ವೇಳಾಪಟ್ಟಿಯನ್ನು ರೂಪಿಸಲಿದ್ದಾರೆ" ಎಂದು ಮೂಲಗಳು ಹೇಳಿವೆ.
ಸ್ಟರ್ಮೆರ್ ಆಡಳಿತದ ಬಗ್ಗೆ ದೇಶಾದ್ಯಂತ ಅಸಮಾಧಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ನ ಲೇಬರ್ ಪಕ್ಷದ ಸರ್ಕಾರ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ. ಮಕ್ಕಳ ಲೈಂಗಿಕ ಅಪರಾಧಿ ಜೆಫ್ರಿ ಎಪ್ ಸ್ಟೀನ್ ಜತೆ ಸಂಬಂಧ ಹೊಂದಿರುವ ಪೀಟರ್ ಮಂಡೆಲ್ಸನ್ ನೇಮಕಾತಿಯಿಂದ ಹಿಡಿದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೀನಾಯ ಸೋಲಿನವರೆಗಿನ ಹಲವು ಅಂಶಗಳ ಆಧಾರದಲ್ಲಿ ಕೀರ್ ಸ್ಟಾರ್ಮರ್ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ.




