‘ನಮ್ಮ ರಸ್ತೆಗಳಿಂದ ತೊಲಗು ಮಿಸ್ಟರ್ ಸಿಂಗ್’: ವಿವಾದ ಸೃಷ್ಟಿಸಿದ ಟ್ರಂಪ್ ಆಡಳಿತದ ‘ಸ್ವಯಂ ಗಡಿಪಾರು’ ಜಾಹೀರಾತು

ಡೊನಾಲ್ಡ್ ಟ್ರಂಪ್| Photo Credit ; PTI , Homeland Security \ X
ವಾಷಿಂಗ್ಟನ್: ಅಮೆರಿಕದ ಆಂತರಿಕ ಭದ್ರತಾ ಇಲಾಖೆಯು (ಡಿಎಚ್ಎಸ್) ಭಾರತೀಯ ಅಮೆರಿಕನ್ ಟ್ರಕ್ ಚಾಲಕರನ್ನು ಗುರಿಯಾಗಿಸಿಕೊಂಡು ‘ಸ್ವಯಂ ಗಡಿಪಾರು ಮಾಡಿಕೊಳ್ಳಿ ಅಥವಾ ಪರಿಣಾಮ ಎದುರಿಸಿ’ ಎಂಬ ಎಚ್ಚರಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಎಐ-ಸೃಷ್ಟಿತ ಪೋಸ್ಟ್ ತೀವ್ರ ವಿವಾದವನ್ನು ಸೃಷ್ಟಿಸಿದೆ. ಟ್ರಂಪ್ ಆಡಳಿತದ ವಲಸೆ ವಿರೋಧಿ ಕಠಿಣ ಕ್ರಮಗಳ ಹಿನ್ನೆಲೆಯಲ್ಲಿ ಬಿಡುಗಡೆಯಾದ ಈ ಪೋಸ್ಟ್ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದು, ಟೀಕಾಕಾರರು ಇದನ್ನು ಜಾತಿವಾದಿ ಮತ್ತು ಭಾರತೀಯ ವಿರೋಧಿ ಎಂದು ಬಣ್ಣಿಸಿದ್ದಾರೆ.
‘ಟ್ರಾನ್ಸ್ಫಾರ್ಮರ್ಸ್:ಏಜ್ ಆಫ್ ಡಿಪೋರ್ಟೇಶನ್ಸ್’ ಶೀರ್ಷಿಕೆಯೊಂದಿಗೆ ಚಲನಚಿತ್ರದ ಪೋಸ್ಟರ್ ಶೈಲಿಯಲ್ಲಿ ರಚಿಸಲಾಗಿರುವ ವಿವಾದಿತ ಪೋಸ್ಟ್ನಲ್ಲಿ ಟ್ರಾನ್ಸ್ಫಾರ್ಮರ್ಸ್ ಫ್ರಾಂಚೈಸ್ನ ಪಾತ್ರಗಳನ್ನು ಬಳಸಲಾಗಿದ್ದು, ಕಥೆಯ ನಾಯಕ ಆಪ್ಟಿಮಸ್ ಪ್ರೈಮ್ ಕಂದು ಗಡ್ಡದ ವ್ಯಕ್ತಿಯಾದ ‘ಮಿಸ್ಟರ್ ಸಿಂಗ್’ಎಂಬ ಪಾತ್ರವನ್ನು ಎದುರಿಸುವ ಚಿತ್ರದೊಂದಿಗೆ ಎಚ್ಚರಿಕೆ ಸಂದೇಶವನ್ನು ಮುದ್ರಿಸಲಾಗಿದೆ.
‘ಮಿ.ಸಿಂಗ್’ ಅನ್ನು ಗುರಿಯಾಗಿಸಿಕೊಂಡು ‘ನಮ್ಮ ರಸ್ತೆಗಳಿಂದ ದೂರವಿರಿ, ನಿಮಗೆ ವಾಹನ ಚಲಾಯಿಸುವುದು ಹೇಗೆಂದು ತಿಳಿದಿಲ್ಲ, ಮಿಸ್ಟರ್ ಸಿಂಗ್’’ ಎಂಬ ಸಂದೇಶವನ್ನು ನೀಡಲಾಗಿದ್ದು, ಇದು ವ್ಯಾಪಕ ಖಂಡನೆಗೆ ಕಾರಣವಾಗಿದೆ.
ಮತ್ತೊಂದು ಸಂಬಂಧಿತ ವಿಡಿಯೋದಲ್ಲಿ ಖಳನಾಯಕ ಮೆಗಾಟ್ರಾನ್ ಕಾಣಿಸಿಕೊಂಡಿದ್ದು, ರಸ್ತೆ ಅಪಘಾತಗಳು ಮತ್ತು ಇತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಹರ್ಜಿಂದರ್ ಸಿಂಗ್, ರಾಜಿಂದರ್ ಕುಮಾರ್, ಬೆಕ್ಜಾನ್ ಬೈಶೆಕೀವ್, ಅಖ್ರೋರ್ ಬೋಜೋರೋವ್ ಮತ್ತು ಜಸ್ವೀರ್ ಸಿಂಗ್ ಎಂಬ ಲಾರಿ ಚಾಲಕರ ಬಿಡುಗಡೆಗೆ ಒತ್ತಾಯಿಸುವಂತೆ ಬಿಂಬಿಸಲಾಗಿದೆ.
‘ನೀವು ಈ ರಾಷ್ಟ್ರದ ವಿರುದ್ಧ ದ್ವೇಷದ ಉದ್ದೇಶದಿಂದ ಬಂದರೆ ನಾವು ನಮ್ಮನ್ನು, ಅಮೆರಿಕದ ತತ್ವಗಳನ್ನು ಹಾಗೂ ನಮ್ಮ ಮನೆಯನ್ನು ರಕ್ಷಿಸಿಕೊಳ್ಳುತ್ತೇವೆ’’ಎಂದು ಡಿಎಚ್ಎಸ್ ಸಮರ್ಥಿಸಿಕೊಂಡಿದೆ.
ಈ ಅಭಿಯಾನದಲ್ಲಿ ‘ಮಿಸ್ಟರ್ ಸಿಂಗ್’ ಹೆಸರನ್ನು ಬಳಸಿರುವುದನ್ನು ಹಿಂದೂ ಅಮೆರಿಕನ್ ಫೌಂಡೇಶನ್ (ಎಚ್ಎಎಫ್) ಮತ್ತು ಸಿಖ್ ಒಕ್ಕೂಟ ಸೇರಿದಂತೆ ಪ್ರಮುಖ ಹಕ್ಕುಗಳ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಸಿಂಗ್ ಉಪನಾಮ ಹೊಂದಿರುವವರು ಹಿಂದೂಗಳಾಗಿದ್ದಾರೆ, ಸಿಖ್ಖರಾಗಿದ್ದಾರೆ, ಅವರು ಅಮೆರಿಕನ್ನರು ಮತ್ತು ವಾಹನಗಳನ್ನು ಚಲಾಯಿಸುತ್ತಾರೆ ಎಂದು ಎಚ್ಎಎಫ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದು, ಫೆಡರಲ್ ಏಜೆನ್ಸಿಯ ಈ ಜನಾಂಗೀಯ ನಿಂದನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದೆ. ಅದು ಈ ಪೋಸ್ಟ್ ಅನ್ನು ಸಹಾಯಕ ಅಟಾರ್ನಿ ಜನರಲ್ ಹರ್ಮೀತ್ ಕೆ.ಧಿಲ್ಲೋನ್ ಮತ್ತು ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಅವರಿಗೆ ಟ್ಯಾಗ್ ಮಾಡಿದೆ.
ಸಿಖ್ ಒಕ್ಕೂಟವೂ ಈ ಅಭಿಯಾನವನ್ನು ಟೀಕಿಸಿದ್ದು,ಸಿಖ್ಖರು ಇಂದಿಗೂ ತಮ್ಮ ನೋಟ ಮತ್ತು ಸ್ವರೂಪದ ಆಧಾರದಲ್ಲಿ ತಾರತಮ್ಯ ಹಾಗೂ ಪ್ರೊಫೈಲಿಂಗ್ಗೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದೆ. ‘ನಮ್ಮ ಸರಕಾರವೇ ನಮ್ಮನ್ನು ಶತ್ರುಗಳಂತೆ ಬಿಂಬಿಸಿದರೂ ಸಿಖ್ಖರೆಂದು ಗುರುತಿಸಿಕೊಳ್ಳಲು ನಮಗೆ ಯಾವುದೇ ಭೀತಿಯಿಲ್ಲ’ ಎಂದು ಅದು ಹೇಳಿದೆ.
ಅಕ್ರಮ ವಲಸಿಗರು ಸ್ವಯಂಪ್ರೇರಿತರಾಗಿ ಅಮೆರಿಕವನ್ನು ತೊರೆಯಲು ಅನುವು ಮಾಡಿಕೊಡುವ ಸಿಬಿಪಿ ಹೋಮ್ ಕಾರ್ಯಕ್ರಮವನ್ನು ಡಿಎಚ್ಎಸ್ ಪ್ರಚಾರ ಮಾಡುತ್ತಿರುವ ಸಂದರ್ಭದಲ್ಲೇ ಈ ವಿವಾದ ಭುಗಿಲೆದ್ದಿದೆ.






