ʼTaipei 101ʼ ಕಟ್ಟಡ ಏರಿದ್ದಕ್ಕೆ ಅಲೆಕ್ಸ್ ಹೊನಾಲ್ಡ್ ಗೆ 5 ಲಕ್ಷ ಡಾಲರ್ ಸಂಭಾವನೆ; ಅದಕ್ಕಿಂತ ಹೆಚ್ಚು ಮೊತ್ತ ನೀಡುತ್ತಿದ್ದೆ ಎಂದ ಯೂಟ್ಯೂಬರ್ MrBeast

Photo Credit : @FearedBuck
ಹೊಸದಿಲ್ಲಿ: ಖ್ಯಾತ ರಾಕ್ ಕ್ಲೈಂಬರ್ ಅಲೆಕ್ಸ್ ಹೊನಾಲ್ಡ್ 508 ಮೀಟರ್ ಎತ್ತರದ ತೈಪೇಯಿ 101 ಕಟ್ಟಡವನ್ನು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಏರಿ ದಾಖಲೆ ನಿರ್ಮಿಸಿದ್ದಾರೆ. ಈ ಸಾಹಸ ದೃಶ್ಯವನ್ನು ನನ್ನ ಯೂಟ್ಯೂಬ್ ಚಾನೆಲ್ನಲ್ಲಿ ನೇರ ಪ್ರಸಾರ ಮಾಡಿದ್ದರೆ, ನಾನು 5 ಲಕ್ಷ ಡಾಲರ್ಗಿಂತಲೂ ಹೆಚ್ಚು ಮೊತ್ತ ನೀಡುತ್ತಿದ್ದೆ ಎಂದು MrBeast ಎಂದೇ ಖ್ಯಾತರಾಗಿರುವ ಯೂಟ್ಯೂಬರ್ ಜಿಮ್ಮಿ ಡೊನಾಲ್ಡ್ಸನ್ ಹೇಳಿದ್ದಾರೆ.
ಜನವರಿ 25ರಂದು 1667 ಅಡಿ ಎತ್ತರದ ತೈವಾನ್ನಲ್ಲಿರುವ ಈ ಸ್ಕೈಸ್ಕ್ರೇಪರ್ ಅನ್ನು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಅಲೆಕ್ಸ್ ಹೊನಾಲ್ಡ್ ಕೇವಲ ಒಂದು ಗಂಟೆ 32 ನಿಮಿಷಗಳಲ್ಲಿ ಏರಿದ್ದರು. ಈ ಸಾಹಸ ದೃಶ್ಯವನ್ನು ಸ್ಕೈಸ್ಕ್ರೇಪರ್ ಯೋಜನೆಯ ಭಾಗವಾಗಿ ನೆಟ್ಫ್ಲಿಕ್ಸ್ ಒಟಿಟಿ ನೇರ ಪ್ರಸಾರ ಮಾಡಿತ್ತು.
The New York Times ಸುದ್ದಿ ಸಂಸ್ಥೆಯ ಪ್ರಕಾರ, ನೆಟ್ಫ್ಲಿಕ್ಸ್ ಒಟಿಟಿ ವೇದಿಕೆ ಅಲೆಕ್ಸ್ ಹೊನಾಲ್ಡ್ಗೆ 5 ಲಕ್ಷ ಡಾಲರ್ ಸಂಭಾವನೆ ನೀಡಿತ್ತು. ಬಳಿಕ ಮಾತನಾಡಿದ ಹೊನಾಲ್ಡ್, “ಈ ಮೊತ್ತ ಬೇರೆ ಪ್ರಮುಖ ವೃತ್ತಿಪರ ಕ್ರೀಡೆಗಳಲ್ಲಿನ ವೇತನಕ್ಕೆ ಹೋಲಿಸಿದರೆ ಮುಜುಗರವಾಗುವಷ್ಟು ಸಣ್ಣದಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದರ ಹೊರತಾಗಿಯೂ ತಮಗೆ ನೀಡಿದ ಸಂಭಾವನೆಯ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದ ಹೊನಾಲ್ಡ್, ಈ ಮೊತ್ತದಿಂದ ನನ್ನ ಕ್ಯಾಮೆರಾ ತಂಡ ಹಾಗೂ ಆತ್ಮೀಯ ಮಿತ್ರರಿಗೆ ನೆರವು ನೀಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಅಲ್ಲದೆ, ನಾನು ಸಂಭಾವನೆ ಇಲ್ಲದಿದ್ದರೂ ರಾಕ್ ಕ್ಲೈಂಬಿಂಗ್ ಮಾಡುತ್ತಿದ್ದೆ ಎಂದೂ ತಿಳಿಸಿದ್ದಾರೆ.
ಈ ಸುದ್ದಿಗೆ ಸಂಬಂಧಿಸಿದಂತೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ MrBeast, ನನ್ನ ಯೂಟ್ಯೂಬ್ ವೇದಿಕೆಯಲ್ಲಿ ಈ ಸಾಹಸ ಪ್ರಸಾರವಾಗಿದ್ದರೆ, ನಾನು ಇನ್ನೂ ಹೆಚ್ಚು ಮೊತ್ತ ನೀಡುತ್ತಿದ್ದೆ ಎಂದು ಹೇಳಿದ್ದಾರೆ.
ಈ ಪೋಸ್ಟ್ಗೆ ಪ್ರತಿಕ್ರಿಯೆಗಳ ಮಹಾಪೂರ ಹರಿದು ಬರುತ್ತಿದ್ದು, “ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ಸಾಹಸಕ್ಕೆ ಮುಂದಾಗಿರಬಹುದು. ಆದರೆ, ಈ ಸಾಹಸವನ್ನು ದಾರಿಹೋಕರಿಗೆ ಯಾವುದೇ ಅಪಾಯವಾಗದಂತೆ ಕಾನೂನುಬದ್ಧವಾಗಿ ನಡೆಸಿದ್ದಾರೆ” ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು, “ಅವರಿಗೆ ಬಹುಶಃ ಇನ್ನಷ್ಟು ಲೈಕ್ ಗಳು ದೊರೆಯಬಹುದು ಹಾಗೂ ಮತ್ತಷ್ಟು ಸಾಹಸ ದೃಶ್ಯಗಳನ್ನು ಪೋಸ್ಟ್ ಮಾಡಬಹುದು. ಅದರಿಂದ ಅವರಿಗೆ ಹೂಡಿಕೆಯೂ ಮರಳಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.







