ಕುಲಭೂಷಣ್ ಜಾಧವ್ ಬಂಧನಕ್ಕೆ ನೆರವಾಗಿದ್ದ ‘ವಿದ್ವಾಂಸ’ ಮುಫ್ತಿ ಶಾ ಮೀರ್ ಬಲೂಚಿಸ್ತಾನದಲ್ಲಿ ಹತ್ಯೆ

PC | NDTV
ಇಸ್ಲಾಮಾಬಾದ್ : ಇರಾನ್ನಿಂದ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಅಪಹರಿಸಲು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐಗೆ ನೆರವಾಗಿದ್ದ ಆರೋಪ ಎದುರಿಸುತ್ತಿರುವ ಪಾಕಿಸ್ತಾನಿ ವಿದ್ವಾಂಸರೊಬ್ಬರನ್ನು ಶುಕ್ರವಾರ ರಾತ್ರಿ ಅಪರಿಚಿತ ಬಂದೂಕುಧಾರಿಗಳು ಶುಕ್ರವಾರ ರಾತ್ರಿ ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಬಲೂಚಿಸ್ತಾನದ ಪ್ರಮುಖ ಧಾರ್ಮಿಕ ವಿದ್ವಾಂಸರಾದ ಮುಫ್ತಿ ಶಾ ಮೀರ್ ಮೇಲೆ ಈ ಹಿಂದೆಯೂ ಎರಡು ಬಾರಿ ಹತ್ಯೆ ಯತ್ನಗಳು ನಡೆದಿದ್ದವು ಎಂದು ಮಾಧ್ಯಮಗಳು ವರದಿ ಮಾಡಿವೆ.
ಮುಫ್ತಿ ಶಾ ಮೀರ್, ರಾತ್ರಿ ವೇಳೆಯ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ಸ್ಥಳೀಯ ಮಸೀದಿಯಿಂದ ಹೊರಬರುತ್ತಿದ್ದಾಗ ಮೋಟಾರ್ ಸೈಕಲ್ಗಳಲ್ಲಿ ಬಂದ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅತ್ಯಂತ ಸನಿಹದಿಂದ ಗುಂಡಿಕ್ಕಲಾಗಿದ್ದು, ಗಂಭೀರ ಗಾಯಗೊಂಡಿದ್ದ ಶಾ ಮೀರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪಾಕಿಸ್ತಾನದ ಜಮೀಯತ್ ಉಲೇಮಾ ಏ ಇಸ್ಲಾಂನ ಸದಸ್ಯನಾಗಿದ್ದ ಮುಫ್ತಿ ಶಾ ಮೀರ್, ಧಾರ್ಮಿಕ ವಿದ್ವಾಂಸರ ಸೋಗಿನಲ್ಲಿ ಶಸ್ತ್ರಾಸ್ತ್ರ ಹಾಗೂ ಮಾನವಕಳ್ಳಸಾಗಣೆ ನಡೆಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಐಎಸ್ಐ ಜೊತೆಗೂ ನಿಕಟ ಸಂಪರ್ಕವನ್ನು ಹೊಂದಿದ್ದ ಅವರು ಪಾಕಿಸ್ತಾನದಲ್ಲಿರುವ ಉಗ್ರಗಾಮಿ ಶಿಬಿರಗಳಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಅಲ್ಲದೇ ಭಾರತೀಯ ಪ್ರಾಂತದೊಳಗೆ ನುಸುಳಲು ಉಗ್ರರಿಗೆ ನೆರವಾಗುತ್ತಿದ್ದರು ಎನ್ನಲಾಗಿದೆ.
ಮೀರ್ ಶಾ ಅವರ ಪಕ್ಷದ ಇನ್ನಿಬ್ಬರು ಕಾರ್ಯಕರ್ತರನ್ನು ಕಳೆದ ವಾರ ಬಲೂಚಿಸ್ತಾನದ ಮೂರನೇ ಅತಿ ದೊಡ್ಡ ನಗರ ಖುಜ್ದಾರ್ ನಲ್ಲಿ ಅಪರಿಚಿತರು ಗುಂಡಿಕ್ಕಿ ಹತ್ಯೆಗೈದಿದ್ದರು.
ಇರಾನ್ ನ ಚಾಬಹಾರ್ ನಲ್ಲಿ ಉದ್ಯಮವೊಂದನ್ನು ನಡೆಸುತ್ತಿದ್ದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಬೇಹುಗಾರಿಕೆಯ ಆರೋಪದಲ್ಲಿ ಬಲೂಚಿಸ್ತಾನದಲ್ಲಿ ಬಂಧಿಸಲಾಗಿತ್ತು. 2017ರಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯವು ಅವರಿಗೆ ಗಲ್ಲು ಶಿಕ್ಷೆಯನ್ನು ಘೋಷಿಸಿತ್ತು.
2019ರಲ್ಲಿ ಪಾಕಿಸ್ತಾನದ ಅಂತಾರಾಷ್ಟ್ರೀಯ ನ್ಯಾಯಾಲಯವು ಅವರ ಗಲ್ಲು ಶಿಕ್ಷೆಯನ್ನು ತಡೆಹಿಡಿದಿತ್ತು. ಕುಲಭೂಷಣ್ ವಿರುದ್ಧದ ದೋಷಿತ್ವದದ ತೀರ್ಪನ್ನು ಮರುಪರಿಶೀಲಿಸುವಂತೆ ಪಾಕ್ಗೆ ಸೂಚಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯವು ಅವರಿಗೆ ಕಾನ್ಸುಲರ್ ಸಂಪರ್ಕವನ್ನು ಪಡೆಯಲು ಅವಕಾಶ ನೀಡಿತ್ತು.
ಜಾಧವ್ ಅಪಹರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇನ್ನೋರ್ವ ಆರೋಪಿ, ಝೈಶ್ ಅಲ್ ಅದಲ್ನ ನಾಯಕ ಮುಸ್ಲಾ ಉಮರ್ ಇರಾನಿಯನ್ನು 2020ರಲ್ಲಿ ಟುರ್ಬಾಟ್ ಎಂಬಲ್ಲಿ ಹತ್ಯೆಗೈಯಲಾಗಿತ್ತು.







