ಮುಲ್ತಾನ್ ಸುಲ್ತಾನ್ಸ್ ಮಾಲೀಕರಿಂದ ಕಾನೂನು ಕ್ರಮದ ಎಚ್ಚರಿಕೆ; ಪಿಸಿಬಿ, ಪಿಎಸ್ಎಲ್ ಗೆ ಸಂಕಷ್ಟ

PC: x.com/CricketNDTV
ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ ಮತ್ತು ಮುಲ್ತಾನ್ ಸುಲ್ತಾನ್ಸ್ ಫ್ರಾಂಚೈಸಿ ಮಾಲೀಕ ಅಲಿ ಖಾನ್ ತರೀನ್ ನಡುವಿನ ಸಂಬಂಧ ತೀವ್ರ ಹದಗೆಟ್ಟಿದೆ. ಟೂರ್ನಿಯನ್ನು ತರೀನ್ ಬಹಿರಂಗವಾಗಿ ಟೀಕಿಸಿದ್ದು, ಇದಕ್ಕಾಗಿ ಟೂರ್ನಿ ನಿರ್ವಹಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಕಾನೂನಾತ್ಮಕ ನೋಟಿಸ್ ಪಡೆದಿದ್ದಾರೆ.
ತರೀನ್ ಅವರು ಪ್ರಾಂಚೈಸಿ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಪಿಸಿಬಿ ಆಪಾದಿಸಿದೆ. ಇದಕ್ಕೆ ಪ್ರತಿಯಾಗಿ ಮುಲ್ತಾನ್ ಸುಲ್ತಾನ್ಸ್ ಮಾಲೀಕರು ಪಿಸಿಬಿಯನ್ನು ಅಣಕಿಸಿ ಮತ್ತೆ ವ್ಯಂಗ್ಯದ ಕ್ಷಮೆ ಕೋರಿದ್ದಾರೆ. ಜತೆಗೆ ತಮಗೆ ನೀಡಿದ ಕಾನೂನು ನೋಟಿಸನ್ನು ಹರಿದು ಹಾಕಿದ್ದಾರೆ.
ಮುಲ್ತಾನ್ ಸುಲ್ತಾನ್ಸ್ ಫ್ರಾಂಚೈಸಿ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಮತ್ತು ನವೀಕರಣ ಪತ್ರದ ಸಂಬಂಧ ತರೀನ್ ಮಾಡಿರುವ ಇ-ಮೇಲ್ ಗೆ ಪಿಸಿಬಿ ಹಾಗೂ ಪಿಎಎಸ್ಎಲ್ ಸ್ಪಂದಿಸಿಲ್ಲ ಎನ್ನುವುದು ತರೀನ್ ಆಕ್ರೋಶಕ್ಕೆ ಕಾರಣ. ಈ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
ಬುಧವಾರ ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿದ ತರೀನ್, "ನಮ್ಮೊಂದಿಗೆ ಪಿಸಿಬಿ ಸಂವಹನ ಮಾಡದೇ ಇರುವುದರಿಂದ, ನಾವೇ ಅಪ್ಡೇಟ್ ಹಂಚಿಕೊಳ್ಳುತ್ತಿದ್ದೇವೆ. ನಾವು ನಿರಂತರವಾಗಿ ಮಾಡಿರುವ ಇ-ಮೇಲ್ ಗಳಿಗೆ ಪಿಸಿಬಿ ಪ್ರತಿಕ್ರಿಯಿಸಿಲ್ಲ. ನಾವು ಕಳುಹಿಸಿರುವ ಕಾನೂನಾತ್ಮಕ ಪತ್ರಗಳಿಗೂ ಸ್ಪಂದಿಸಿಲ್ಲ. ಮೌಲ್ಯಮಾಪನ ಮತ್ತು ನವೀಕರಣ ಪ್ರಕ್ರಿಯೆಗೆ ಏಕೆ ನಮ್ಮ ಫ್ರಾಂಚೈಸಿಯನ್ನ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದರೂ ಉತ್ತರಿಸಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.







