ಸಮುದ್ರ ಮಟ್ಟ ಏರಿಕೆ : ಮುಳುಗಡೆಯಾಗುವ ಅಪಾಯದಲ್ಲಿ ಮುಂಬೈ ನಗರ ; ವಿಶ್ವಸಂಸ್ಥೆ ವರದಿ

Photo Credit : PTI
ವಿಶ್ವಸಂಸ್ಥೆ: ಸಮುದ್ರ ಮಟ್ಟ ಏರಿಕೆಯಿಂದಾಗಿ ಶಾಶ್ವತವಾಗಿ ಮುಳುಗಡೆಯಾಗುವ ಅಪಾಯವನ್ನು ಎದುರಿಸುತ್ತಿರುವ ದಕ್ಷಿಣ ಏಷ್ಯಾದ ಬೃಹತ್ ನಗರಗಳಲ್ಲಿ ಮುಂಬೈ ಕೂಡ ಒಂದಾಗಿದೆ. ಈ ಪ್ರದೇಶದಾದ್ಯಂತ 1.4 ಕೋಟಿಗೂ ಹೆಚ್ಚು ಜನರು ತಮ್ಮ ಮನೆಗಳನ್ನು ಕಳೆದುಕೊಂಡು ಸ್ಥಳಾಂತರಗೊಳ್ಳುವ ಅಂಚಿನಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ಹೊಸ ವರದಿಯೊಂದು ಎಚ್ಚರಿಸಿದೆ.
ಆಗಸ್ಟ್ 31 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ `ಸಮುದ್ರ ಮಟ್ಟದ ಏರಿಕೆಗೆ ಸಂಬಂಧಿಸಿದ ಸವಾಲುಗಳು ಮತ್ತು ಪರಿಹಾರದ ಮಾರ್ಗಗಳು' ಎಂಬ ಶೀರ್ಷಿಕೆಯ ವರದಿಯನ್ನು ಮಂಡಿಸಲಾಯಿತು.
ದಕ್ಷಿಣ ಏಷ್ಯಾದ ಮುಂಬೈ, ಕೋಲ್ಕತ್ತಾ ಮತ್ತು ಢಾಕಾ ನಗರಗಳನ್ನು ಉಲ್ಲೇಖಿಸಲಾಗಿದ್ದು, ಇಲ್ಲಿ ಸಮುದ್ರ ಮಟ್ಟದ ಏರಿಕೆಯ ಪರಿಣಾಮಗಳು ಕೇವಲ ಆರ್ಥಿಕತೆಯ ಮೇಲಷ್ಟೇ ಅಲ್ಲದೆ, ಬೃಹತ್ ಪ್ರಮಾಣದಲ್ಲಿ ಮಾನವ ಸ್ಥಳಾಂತರಕ್ಕೂ ಕಾರಣವಾಗಬಹುದು. ಹಣಕಾಸಿನ ನಷ್ಟದ ಪರಿಣಾಮಗಳಿಗೆ ಕೊಡುವಷ್ಟೇ ತುರ್ತು ಪ್ರಾಮುಖ್ಯತೆಯನ್ನು ಮಾನವ ಜೀವಗಳು ಮತ್ತು ಸ್ಥಳಾಂತರದಂತಹ ಸಾಮಾಜಿಕ ಅಪಾಯಗಳಿಗೂ ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ವರದಿ ಹೇಳಿದೆ.
ಜಾಗತಿಕ ಸಮುದ್ರ ಮಟ್ಟದ ನಿರಂತರ ಏರಿಕೆಯನ್ನು ವರದಿ ಎತ್ತಿಹಿಡಿದಿದೆ. 2014 ಮತ್ತು 2023ರ ನಡುವೆ ವಾರ್ಷಿಕ ಸರಾಸರಿ 4.7 ಮಿಮೀ ನಷ್ಟು ಏರಿಕೆಯಾಗಿದ್ದರೆ, 2024ರಲ್ಲಿ ದಾಖಲೆ ಪ್ರಮಾಣದ ಅಂದರೆ 5.9 ಮಿಮೀ ನಷ್ಟು ಸಮುದ್ರ ಮಟ್ಟ ಏರಿಕೆಯಾಗಿದೆ. ಅತ್ಯಂತ ಕಟ್ಟುನಿಟ್ಟಾದ ಇಂಗಾಲದ ಹೊರಸೂಸುವಿಕೆ ಕಡಿತದ ನಿಯಮಗಳನ್ನು ಪಾಲಿಸಿದರೂ ಸಹ, 2100ರ ವೇಳೆಗೆ ಜಾಗತಿಕ ಸಮುದ್ರ ಮಟ್ಟವು ಕನಿಷ್ಠ 0.5 ಮೀಟರ್ ಹೆಚ್ಚಾಗಬಹುದು. ಪಶ್ಚಿಮ ಅಂಟಾಕ್ರ್ಟಿಕ್ ಮಂಜುಗಡ್ಡೆಯ ಕುಸಿತದಂತಹ ಪರಿಸ್ಥಿತಿಗಳಲ್ಲಿ, ಈ ಏರಿಕೆಯು 2 ಮೀಟರ್ಗಳವರೆಗೆ ಹೆಚ್ಚಾಗುವ ಸಾಧ್ಯತೆಯಿದ್ದು, ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತೀವ್ರ ಬೆದರಿಕೆಯನ್ನು ಒಡ್ಡುತ್ತದೆ.
ಭೂಕುಸಿತ ಮತ್ತು ಉಪ್ಪು ನೀರು ಒಳನುಗ್ಗುವಿಕೆಯಂತಹ ಸಮಸ್ಯೆಗಳೊಂದಿಗೆ ಮುಂಬೈಗೆ ಅಪಾಯವು ಮತ್ತಷ್ಟು ಹೆಚ್ಚಾಗಿದೆ. ಚಂಡಮಾರುತದ ಅಲೆಗಳಿಂದಾಗಿ ನೈರ್ಮಲ್ಯ, ವಸತಿ ಮತ್ತು ಸಾರಿಗೆ ಮೂಲಸೌಕರ್ಯಗಳ ಮೇಲೆಯೂ ತೀವ್ರ ಪರಿಣಾಮ ಬೀರಬಹುದು ಎಂದು ವರದಿ ಹೇಳಿದೆ. 2021ರಲ್ಲಿ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಬಿಡುಗಡೆ ಮಾಡಿದ್ದ ಮುಂಬೈನ ಹವಾಮಾನ ಕ್ರಿಯಾ ಯೋಜನೆಯಲ್ಲಿ `2050ರ ವೇಳೆಗೆ ಮುಂಬೈ ದ್ವೀಪ ನಗರದ ಶೇಕಡಾ 80 ರಷ್ಟು ಭಾಗವು ನೀರಿನಲ್ಲಿ ಮುಳುಗಡೆಯಾಗಬಹುದು' ಎಂದು ಎಚ್ಚರಿಸಿತ್ತು.






