ಸಬ್ಸಿಡಿಯಿಲ್ಲದಿದ್ದರೆ ಅಂಗಡಿ ಮುಚ್ಚಿ ದಕ್ಷಿಣ ಆಫ್ರಿಕಾಗೆ ಹಿಂತಿರುಗಬೇಕಾಗಬಹುದು: ಎಲಾನ್ ಮಸ್ಕ್ಗೆ ಟ್ರಂಪ್ ಎಚ್ಚರಿಕೆ

ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ (File Photo: PTI)
ವಾಷಿಂಗ್ಟನ್ : ಸರಕಾರಿ ಸಬ್ಸಿಡಿಯಿಲ್ಲದೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ವ್ಯವಹಾರ ಉಳಿಯುವುದಿಲ್ಲ. ಸಬ್ಸಿಡಿಯಿಲ್ಲದಿದ್ದರೆ ಮಸ್ಕ್ ಅಂಗಡಿಯನ್ನು ಮುಚ್ಚಿ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಎಲೆಕ್ಟ್ರಿಕ್ ಕಾರುಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಸರಕಾರ ತೆಗೆದು ಹಾಕಿದ್ದರಿಂದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ. ಒಂದು ಕಾಲದಲ್ಲಿ ಆಪ್ತಮಿತ್ರರಾಗಿದ್ದ ಡೊನಾಲ್ಡ್ ಟ್ರಂಪ್ ಮತ್ತು ಉದ್ಯಮಿ ಎಲಾನ್ ಮಸ್ಕ್ ನಡುವಿನ ಸಮರ ಮುಂದುವರಿದಿದೆ.
ಟ್ರುತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ʼಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಬಲವಾಗಿ ಬೆಂಬಲಿಸುವ ಮೊದಲೇ ನಾನು EV ಮ್ಯಾಂಡೇಟ್ನ್ನು ಬಲವಾಗಿ ವಿರೋಧಿಸುತ್ತೇನೆ ಎಂದು ಅವರಿಗೆ ತಿಳಿದಿತ್ತು. ವಿದ್ಯುತ್ ವಾಹನಗಳು ಉತ್ತಮವೇ ಆಗಿದೆ. ಆದರೆ ಪ್ರತಿಯೊಬ್ಬರೂ ಅದನ್ನು ಖರೀದಿಸುವಂತೆ ಒತ್ತಾಯಿಸಬಾರದು. ಈ ಹಿಂದೆ ಎಲಾನ್ ಮಸ್ಕ್ ಯಾವುದೇ ಮನುಷ್ಯನಿಗಿಂತ ಹೆಚ್ಚಿನ ಸಬ್ಸಿಡಿ ಪಡೆದಿರಬಹುದು. ಸಬ್ಸಿಡಿಗಳಿಲ್ಲದಿದ್ದರೆ, ಎಲಾನ್ ಬಹುಶಃ ಅಂಗಡಿಯನ್ನು ಮುಚ್ಚಿ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಬೇಕಾಗಬಹುದು. ರಾಕೆಟ್ ಉಡಾವಣೆ, ಉಪಗ್ರಹಗಳು ಅಥವಾ ಎಲೆಕ್ಟ್ರಿಕ್ ಕಾರು ಉತ್ಪಾದನೆ ಯಾವುದೂ ಇರುವುದಿಲ್ಲʼ ಎಂದು ಹೇಳಿದ್ದಾರೆ.







