ಮಸ್ಕ್ ಪಕ್ಷ ಹಾಸ್ಯಾಸ್ಪದ; ದ್ವಿಪಕ್ಷೀಯ ಪಕ್ಷ ವ್ಯವಸ್ಥೆ ಮುಂದುವರಿಕೆಗೆ ಟ್ರಂಪ್ ಒಲವು

ಎಲಾನ್ ಮಸ್ಕ್ , ಡೊನಾಲ್ಡ್ ಟ್ರಂಪ್ | PTI
ವಾಷಿಂಗ್ಟನ್: ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ 'ಅಮೆರಿಕ ಪಾರ್ಟಿ' ಎಂಬ ಹೊಸ ರಾಜಕೀಯ ಪಕ್ಷ ಆರಂಭಿಸಿರುವುದನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ಹಾಸ್ಯಾಸ್ಪದ' ಎಂದು ಬಣ್ಣಿಸಿದ್ದಾರೆ. ಸಾಂಪ್ರದಾಯಿಕ ದ್ವಿಪಕ್ಷೀಯ ವ್ಯವಸ್ಥೆಯಲ್ಲಿ ಮಾತ್ರವೇ ತಮಗೆ ನಂಬಿಕೆ ಇರುವುದಾಗಿ ಪುನರುಚ್ಚರಿಸಿದ್ದಾರೆ.
ಮಸ್ಕ್ ಅವರ ಘೋಷಣೆ ಬಗ್ಗೆ ಕೇಳಿದಾಗ, "ಇದು ಹಾಸ್ಯಾಸ್ಪದ. ರಿಪಬ್ಲಿಕನ್ ಪಕ್ಷದ ಮೂಲಕ ನಾವು ಅದ್ಭುತ ಯಶಸ್ಸು ಸಾಧಿಸಿದ್ದೇವೆ. ಡೆಮಾಕ್ರಟಿಕ್ ಪಕ್ಷ ತಮ್ಮ ದಾರಿಯನ್ನು ಕಳೆದುಕೊಂಡಿದೆ. ಆದರೆ ಸದಾ ಎರಡು ಪಕ್ಷಗಳ ವ್ಯವಸ್ಥೆ ಇರಬೇಕು" ಎಂದು ಅವರು ಪ್ರತಿಕ್ರಿಯಿಸಿದರು.
"ಮೂರನೇ ಪಕ್ಷ ಎಂದೂ ಕಾರ್ಯಸಾಧು ಎನಿಸದು; ನಾವು ಅದರ ತಮಾಷೆ ನೋಡಬಹುದು" ಎಂದು ಚುಚ್ಚಿದರು. ಅಮೆರಿಕದ ದ್ವಿಪಕ್ಷೀಯ ಪಕ್ಷ ವ್ಯವಸ್ಥೆಗೆ ಸವಾಲಾಗಿ ಮಸ್ಕ್ ಹೊಸ ರಾಜಕೀಯ ಪಕ್ಷ ಆರಂಭವನ್ನು ಘೋಷಿಸಿದ್ದಾರೆ. ತಮ್ಮ ಎರಡನೇ ಅಧಿಕಾರಾವಧಿಯ ಪ್ರಮುಖ ಶಾಸನ ಎನಿಸಿದ "ವನ್ ಬಿಗ್, ಬ್ಯೂಟಿಫುಲ್ ಬಿಲ್" ಗೆ ಟ್ರಂಪ್ ಸಹಿ ಮಾಡಿದ ಬೆನ್ನಲ್ಲೆ ಮಸ್ಕ್ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ್ದರು.
ಟ್ರಂಪ್ ಅವರ ಆಪ್ತ ವಲಯದಲ್ಲಿದ್ದ ಮಸ್ಕ್, 2024 ಚುನಾವಣೆಯಲ್ಲಿ ಟ್ರಂಪ್ ಪ್ರಚಾರಕ್ಕೆ ಅತಿದೊಡ್ಡ ದೇಣಿಗೆ ನೀಡಿದ ದಾನಿಯ. ಸರ್ಕಾರಿ ಕ್ಷಮತೆ ಇಲಾಖೆಯ ಮುಖ್ಯಸ್ಥ ಹುದ್ದೆಯನ್ನು ನಿಭಾಯಿಸಿ ಫೆಡರಲ್ ವೆಚ್ಚ ಕಡಿಗೊಳಿಸುವ ಪ್ರಯತ್ನ ಮಾಡಿದ್ದ ಮಸ್ಕ್, ಆ ಬಳಿಕ ಟ್ರಂಪ್ ವಿರುದ್ಧ ಬಹಿರಂಗ ಸಮರ ಸಾರಿದ್ದರು.







