‘ನೀವು ಯಾವ ಕಡೆ ಇದ್ದೀರಿ?’: ಮುಸ್ಲಿಂ ರಾಷ್ಟ್ರಗಳಿಗೆ ಲಾರಿಜಾನಿ ಪ್ರಶ್ನೆ

ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ | Photo Credit : aljazeera.com
ಟೆಹ್ರಾನ್, ಮಾ.16: ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ಇರಾನ್ ಸ್ಥಿರವಾಗಿದೆ ಎಂದು ಇರಾನ್ ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ತಿಳಿಸಿದ್ದಾರೆ.
ಇರಾನ್ ಮೇಲೆ ದಾಳಿ ನಡೆದ ಸಂದರ್ಭಗಳಲ್ಲಿ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಂದ ನಿರೀಕ್ಷಿತ ಮಟ್ಟದ ಬೆಂಬಲ ದೊರಕಿಲ್ಲವೆಂದು ಅವರು ನಿರಾಶೆ ವ್ಯಕ್ತಪಡಿಸಿದರು. “ಕೆಲವು ರಾಷ್ಟ್ರಗಳು ಇನ್ನೂ ಮುಂದೆ ಹೋಗಿ, ತಮ್ಮ ಪ್ರದೇಶದೊಳಗಿನ ಅಮೆರಿಕದ ಸೈನಿಕ ನೆಲೆಗಳು ಹಾಗೂ ಅಮೆರಿಕ ಮತ್ತು ಇಸ್ರೇಲ್ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡಿರುವುದರಿಂದ ಇರಾನ್ ಅನ್ನು ತಮ್ಮ ಎದುರಾಳಿಯಾಗಿ ಘೋಷಿಸಿವೆ” ಎಂದು ಹೇಳಿದರು.
ಇರಾನ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಹಿತಾಸಕ್ತಿಗಳನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂದು ಹೇಳುತ್ತಿದ್ದರೂ, ಅದರ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳು ಗಲ್ಫ್ ಪ್ರದೇಶದ ಹೋಟೆಲ್ಗಳು ಮತ್ತು ಇಂಧನ ಸೌಲಭ್ಯಗಳು ಸೇರಿದಂತೆ ನಾಗರಿಕ ತಾಣಗಳಿಗೂ ತಾಕಿರುವುದಾಗಿ ವರದಿಯಾಗಿದೆ.
ನೆರೆಯ ರಾಷ್ಟ್ರಗಳಲ್ಲಿ ಅಮೆರಿಕದ ಸೈನಿಕ ನೆಲೆಗಳು ಇರುವ ಸಂದರ್ಭದಲ್ಲಿ ಇರಾನ್ “ತನ್ನ ಕೈಗಳನ್ನು ಕಟ್ಟಿ ಸುಮ್ಮನಿರುತ್ತದೆ ಎಂದು ನಿರೀಕ್ಷಿಸಲಾಗುವುದಿಲ್ಲ” ಎಂದು ಲಾರಿಜಾನಿ ಹೇಳಿದರು.
“ಇಂದಿನ ದಾಳಿಯು ವಾಸ್ತವದಲ್ಲಿ ಒಂದು ಕಡೆ ಅಮೆರಿಕ ಮತ್ತು ಇಸ್ರೇಲ್, ಮತ್ತೊಂದು ಕಡೆ ಮುಸ್ಲಿಂ ರಾಷ್ಟ್ರ ಇರಾನ್ ಮತ್ತು ಪ್ರತಿರೋಧ ಶಕ್ತಿಗಳ ನಡುವೆ ಇದೆ. ಹಾಗಾದರೆ ನೀವು ಯಾವ ಕಡೆ ಇದ್ದೀರಿ?” ಎಂದು ಅವರು ಮುಸ್ಲಿಂ ರಾಷ್ಟ್ರಗಳನ್ನು ಪ್ರಶ್ನಿಸಿದರು.
ಮುಸ್ಲಿಂ ರಾಷ್ಟ್ರಗಳ ಏಕತೆಗೆ ಕರೆ ನೀಡಿದ ಲಾರಿಜಾನಿ, ಇರಾನ್ ಈ ಪ್ರದೇಶದ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
“ಅಮೆರಿಕಕ್ಕೆ ಯಾವುದೇ ನಿಷ್ಠೆ ಇಲ್ಲ ಮತ್ತು ಇಸ್ರೇಲ್ ವಾಸ್ತವವಾಗಿ ನಿಮ್ಮ ಶತ್ರು ಎಂಬುದು ನಿಮಗೆ ತಿಳಿದಿದೆ” ಎಂದು ಅವರು ಹೇಳಿದರು.







