ಹೊಸ ಗ್ರಹಗಳ ಹುಡುಕಾಟಕ್ಕೆ ನ್ಯಾನ್ಸಿ ಗ್ರೇಸ್ ರೋಮನ್ ದೂರದರ್ಶಕ ಉಡಾವಣೆ

Screengrab : X \ @XploraSpace
ಫ್ಲೋರಿಡಾ: ಹೊಸ ಗ್ರಹಗಳನ್ನು ಪತ್ತೆಹಚ್ಚುವುದು ಮತ್ತು ಬ್ರಹ್ಮಾಂಡದ ರಹಸ್ಯಗಳನ್ನು ತಿಳಿದುಕೊಳ್ಳುವುದು ಸೇರಿದಂತೆ ಹಲವು ಉದ್ದೇಶಗಳನ್ನು ಹೊಂದಿರುವ ನಾಸಾದ ನ್ಯಾನ್ಸಿ ಗ್ರೇಸ್ ರೋಮನ್ ಬಾಹ್ಯಾಕಾಶ ದೂರದರ್ಶಕವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಸ್ಪೇಸ್ಎಕ್ಸ್ ನ ಫಾಲ್ಕನ್ ಹೆವಿ ರಾಕೆಟ್ ಮೂಲಕ ಅಮೆರಿಕದ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಲಾಂಚ್ ಕಾಂಪ್ಲೆಕ್ಸ್ 39Aನಿಂದ ಭಾರತೀಯ ಕಾಲಮಾನ ಸಂಜೆ 4.57ರ ಸುಮಾರಿಗೆ ದೂರದರ್ಶಕವನ್ನು ಉಡಾವಣೆ ಮಾಡಲಾಯಿತು.
ಉಡಾವಣೆಯೊಂದಿಗೆ ರೋಮನ್ ದೂರದರ್ಶಕವು ಬಾಹ್ಯಾಕಾಶದತ್ತ ತನ್ನ ಪ್ರಯಾಣ ಆರಂಭಿಸಿದೆ. ಈ ಕಾರ್ಯಾಚರಣೆಯು ವಿಜ್ಞಾನಿಗಳು ಬ್ರಹ್ಮಾಂಡವನ್ನು ಅಧ್ಯಯನ ಮಾಡುವ ವಿಧಾನದಲ್ಲಿ ಮಹತ್ವದ ಬದಲಾವಣೆ ತರಬಹುದು ಎಂದು ನಿರೀಕ್ಷಿಸಲಾಗಿದೆ.
15 ಲಕ್ಷ ಕಿ.ಮೀ. ದೂರದ L2 ಕಡೆಗೆ
ಉಡಾವಣೆಯ ಬಳಿಕ ರೋಮನ್ ದೂರದರ್ಶಕವು ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿರುವ ಸೂರ್ಯ–ಭೂಮಿ ವ್ಯವಸ್ಥೆಯ ಎರಡನೇ ಲ್ಯಾಗ್ರೇಂಜ್ ಪಾಯಿಂಟ್ (L2) ಕಡೆಗೆ ಪ್ರಯಾಣಿಸುತ್ತಿದೆ.
ಸಾಮಾನ್ಯ ಬಾಹ್ಯಾಕಾಶ ದೂರದರ್ಶಕಗಳಂತೆ ಭೂಮಿಯನ್ನು ಸುತ್ತುವ ಬದಲು, ರೋಮನ್ ದೂರದರ್ಶಕವು ಸೂರ್ಯ–ಭೂಮಿ L2 ಪ್ರದೇಶದ ಸುತ್ತಲೂ ಕಾರ್ಯನಿರ್ವಹಿಸಲಿದೆ. ಇದರಿಂದ ಬ್ರಹ್ಮಾಂಡವನ್ನು ವಿಶಾಲವಾಗಿ ಹಾಗೂ ತುಲನಾತ್ಮಕವಾಗಿ ಕಡಿಮೆ ಅಡೆತಡೆಗಳೊಂದಿಗೆ ವೀಕ್ಷಿಸಲು ಸಾಧ್ಯವಾಗಲಿದೆ.
ರೋಮನ್ ದೂರದರ್ಶಕವು L2 ತಲುಪಲು ಸುಮಾರು ಒಂದು ತಿಂಗಳು ಬೇಕಾಗುವ ನಿರೀಕ್ಷೆಯಿದೆ. L2 ತಲುಪಿದ ನಂತರ, ಅಲ್ಲಿನ ತನ್ನ ಯೋಜಿತ ಕಕ್ಷೆಯನ್ನು ತಲುಪಲು ಅಗತ್ಯವಾದ ಕಕ್ಷಾ ಬದಲಾವಣೆಗಳನ್ನು ದೂರದರ್ಶಕದಲ್ಲಿರುವ ಪ್ರೊಪಲ್ಷನ್ ವ್ಯವಸ್ಥೆಯ ನೆರವಿನಿಂದ ಕೈಗೊಳ್ಳಲಿದೆ.
ವೈಜ್ಞಾನಿಕ ಅಧ್ಯಯನಕ್ಕೆ ಮೂರು ತಿಂಗಳ ಸಿದ್ಧತೆ
L2 ತಲುಪಿದ ಕೂಡಲೇ ರೋಮನ್ ದೂರದರ್ಶಕವು ವೈಜ್ಞಾನಿಕ ಅಧ್ಯಯನ ಆರಂಭಿಸುವುದಿಲ್ಲ. ನಾಸಾ ಇದಕ್ಕಾಗಿ ಸುಮಾರು ಮೂರು ತಿಂಗಳ ಕಾರ್ಯಾರಂಭದ ಅವಧಿಯನ್ನು ನಿಗದಿಪಡಿಸಿದೆ.
ಈ ಅವಧಿಯಲ್ಲಿ ಇಂಜಿನಿಯರ್ ಗಳು ದೂರದರ್ಶಕದ ವಿವಿಧ ವ್ಯವಸ್ಥೆಗಳು ಮತ್ತು ಉಪಕರಣಗಳನ್ನು ಒಂದೊಂದಾಗಿ ನಿಯೋಜಿಸಿ, ಸಕ್ರಿಯಗೊಳಿಸಿ ಮತ್ತು ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲಿದ್ದಾರೆ. ನಂತರ ವೈಜ್ಞಾನಿಕ ಅಧ್ಯಯನಗಳನ್ನು ಆರಂಭಿಸಲು ದೂರದರ್ಶಕವನ್ನು ಸಿದ್ಧಪಡಿಸಲಾಗುತ್ತದೆ.
ರೋಮನ್ ದೂರದರ್ಶಕದ ಮೂಲಕ ಹೊಸ ಗ್ರಹಗಳ ಹುಡುಕಾಟದ ಜತೆಗೆ ಬ್ರಹ್ಮಾಂಡದ ವಿವಿಧ ರಹಸ್ಯಗಳನ್ನೂ ಅಧ್ಯಯನ ಮಾಡಲಾಗುತ್ತದೆ. ಈ ಕಾರ್ಯಾಚರಣೆಯಿಂದ ಬ್ರಹ್ಮಾಂಡದ ಕುರಿತು ವಿಜ್ಞಾನಿಗಳಿಗೆ ಹೊಸ ಮಾಹಿತಿಗಳು ದೊರೆಯುವ ನಿರೀಕ್ಷೆಯಿದೆ.
ಉಡಾವಣೆಯ ವೀಡಿಯೊ
ರೋಮನ್ ದೂರದರ್ಶಕದ ಉಡಾವಣೆಯ ವಿಡಿಯೊವನ್ನು ಸ್ಪೇಸ್ಎಕ್ಸ್ ಮತ್ತು ನಾಸಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿವೆ. ‘ನ್ಯಾನ್ಸಿ ಗ್ರೇಸ್ ರೋಮನ್ ಬಾಹ್ಯಾಕಾಶ ದೂರದರ್ಶಕವನ್ನು ಬಾಹ್ಯಾಕಾಶಕ್ಕೆ ಉಡಾಯಿಸುವುದನ್ನು ವೀಕ್ಷಿಸಿ’ ಎಂಬ ಸಂದೇಶದೊಂದಿಗೆ ವೀಡಿಯೊ ಹಂಚಿಕೊಳ್ಳಲಾಗಿದೆ.
‘ಗಿಲ್’ (@TraderGillx) ಎಂಬ ಖಾತೆಯೂ ಈ ವಿಡಿಯೊವನ್ನು ಪೋಸ್ಟ್ ಮಾಡಿದೆ.
🚀🔥 Décollage ! Le télescope spatial Nancy Grace Roman s’élance vers l’espace à bord du lanceur lourd Falcon Heavy de SpaceX. Les 2 boosters vont être récupérés, tandis que le corps central sera sacrifié pour rejoindre L2, à 1,5 million de km. https://t.co/min1mZJfc2 pic.twitter.com/cmAu8QIJzw
— Xplora (@XploraSpace) August 30, 2026






