ವಲಸಿಗರ ಪ್ರತಿಭಟನೆ ಹತ್ತಿಕ್ಕಲು ನ್ಯಾಷನಲ್ ಗಾರ್ಡ್ ನೇಮಿಸಿರುವ ಟ್ರಂಪ್ ಕ್ರಮಕ್ಕೆ ಕ್ಯಾಲಿಫೋರ್ನಿಯಾ ಗವರ್ನರ್ ವಿರೋಧ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ಲಾಸ್ ಏಂಜಲಿಸ್ : ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್ ನಗರದಲ್ಲಿ ಅಕ್ರಮ ವಲೆಸಿಗರ ಬಂಧನದ ವಿರುದ್ಧ ಭುಗಿಲೆದ್ದಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ರಾಜ್ಯಪಾಲ ಗೆವಿನ್ ನ್ಯೂಸಮ್ ಹಾಗೂ ರಾಜ್ಯದ ಪೋಲಿಸ್ ಇಲಾಖೆಯ ಗಮನಕ್ಕೆ ತರದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ಯಾಷನಲ್ ಗಾರ್ಡ್ ಗಳನ್ನು ಕಳುಹಿಸಿರುವುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.
ಅಮೆರಿಕ ಕಾನೂನಿನ ಪ್ರಕಾರ, ರಾಜ್ಯವು ವಿನಂತಿಸಿಕೊಳ್ಳದ ಹೊರತು ಕೇಂದ್ರ ಸರಕಾರ ನ್ಯಾಷನಲ್ ಗಾರ್ಡ್ ಗಳನ್ನು ನಿಯೋಜಿಸುವಂತಿಲ್ಲ. ಟ್ರಂಪ್ ಹಾಗೂ ವಿಶ್ವದ ಶ್ರೀಮಂತ ಎಲಾನ್ ಮಸ್ಕ್ ನಡುವಿನ ಬಿರುಕು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕೆಸರೆರಚಾಟದಿಂದ ಗಮನವನ್ನು ಬೇರೆಡೆ ತಿರುಗಿಸಲು ಟ್ರಂಪ್ ಬೇಕೆಂತಲೇ ಪ್ರಜೆಗಳ ಹಾಗೂ ಪೋಲಿಸ್ ನಡುವೆ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆಂದು ರಾಜ್ಯದ ರಾಜ್ಯಪಾಲ ಗೆವಿನ್ ನ್ಯೂಸಮ್ ಹೇಳಿದ್ದಾರೆ.
ರಾಜ್ಯವು ವಿನಂತಿ ಮಾಡದಿದ್ದರೂ, ಅವಶ್ಯಕತೆ ಇಲ್ಲದಿದ್ದರೂ ನ್ಯಾಷನಲ್ ಗಾರ್ಡ್ ಗಳನ್ನು ನಿಯೋಜಿಸಿರುವುದು ಪ್ರಜೆಗಳ ಅಶಾಂತಿ, ಉದ್ವಿಗ್ನ ಸ್ಥಿತಿಯ ಮೇಲೆ ಎಣ್ಣೆ ಸುರಿಯುವಂತಹ ಕೆಲಸವಾಗಿದೆ. ಈ ಉದ್ವಿಗ್ನ ಸ್ಥಿತಿಯನ್ನು ಬೇಕೆಂದೇ ಟ್ರಂಪ್ ಸೃಷ್ಟಿಸುತ್ತಿದ್ದಾರೆ. ಟ್ರಂಪ್ ಅವರ ಈ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ರಾಜ್ಯಪಾಲ ನ್ಯೂಸಮ್ ಹೇಳಿದ್ದಾರೆ.
ಈ ಮಧ್ಯೆ ರಾಜ್ಯಪಾಲರು ನ್ಯಾಯಾಲಯದಲ್ಲಿ ಹೂಡುವ ದಾವೆಯಲ್ಲಿ ಸೋಲಾಗಬಹುದೆಂದು ಟ್ರಂಪ್ ತನ್ನದೇ ದೇಶದಲ್ಲಿ ಸ್ವಾತಂತ್ರ್ಯಾ ನಂತರ ಇಲ್ಲಿಯವರೆಗೂ ಕೇವಲ 30 ಬಾರಿ ಆದೇಶಿಸಿರುವ “ಇನ್ಸರೆಕ್ಷನ್ ವಿಧಿ” (Insurrection Act) ಕ್ರಮವನ್ನು ತರುವ ಬೆದರಿಕೆಯನ್ನು ಹಾಕಿದ್ದಾರೆ. ಈ ವಿಧಿಯನ್ನು ಕೇವಲ ದೇಶ ವಿರೋಧಿ ಕೃತ್ಯಗಳಿಗೆ ಬಳಕೆ ಮಾಡಲಾಗುತ್ತದೆ ಹೊರತು ಸಾಮಾನ್ಯ ಪ್ರತಿಭಟನೆಗಳಿಗಲ್ಲ. ಕೊನೆಯ ಬಾರಿ ಈ ಕಾನೂನನ್ನು ಉಪಯೋಗಿಸಿದ್ದು 1992ರಲ್ಲಾಗಿದೆ.
ಈಗ 2000 ನ್ಯಾಷನಲ್ ಗಾರ್ಡ್ ಗಳನ್ನು ನಿಯೋಜಿಸಲಾಗಿದೆಯೆಂದು ವರದಿಯಾಗಿದೆ. ರಾಜ್ಯಪಾಲ ನ್ಯೂಸಮ್ ಪ್ರಜೆಗಳಿಗೆ ಶಾಂತಿಯುತ ಪ್ರತಿಭಟನೆ ಮುಂದುವರಿಸಬೇಕು ಹಾಗೂ ಟ್ರಂಪ್ ಸೃಷ್ಟಿಸುತ್ತಿರುವ ಉದ್ವಿಗ್ನ, ಅಶಾಂತಿಯ ಬಲೆಯೊಳಗೆ ಬೀಳಬಾರದೆಂದು ವಿನಂತಿಸಿದ್ದಾರೆ.
ವರದಿ: ಕೆ.ಆರ್.ಶ್ರೀನಾಥ್, ಅಟ್ಲಾಂಟ