"ರಾತ್ರಿ ಹೊತ್ತು ನಿದ್ರಿಸಲಾಗುತ್ತಿಲ್ಲ": ಟ್ವಿಟರ್ ಕಟ್ಟಡದ ಮೇಲಿರುವ ಹೊಸ ಲೋಗೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು
ಸ್ಯಾನ್ ಫ್ರಾನ್ಸಿಸ್ಕೊ ತೊರೆಯುವುದಿಲ್ಲವೆಂದ ಎಲಾನ್ ಮಸ್ಕ್

ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟರ್ ಕಟ್ಟಡದ ಮೇಲೆ ತೂಗು ಹಾಕಲಾಗಿರುವ ಬೃಹತ್ ಎಕ್ಸ್ ಲಾಂಛನಕ್ಕೆ ಶಕ್ತಿಶಾಲಿ ಬೆಳಕಿನ ವಿನ್ಯಾಸ ಅಳವಡಿಸಿರುವುದರ ವಿರುದ್ಧ ಆ ಕಟ್ಟಡದ ನೆರೆಹೊರೆಯಲ್ಲಿ ವಾಸಿಸುತ್ತಿರುವವರು ಕಿಡಿ ಕಾರುತ್ತಿದ್ದು, ಆ ಬೆಳಕಿನ ವಿನ್ಯಾಸದಿಂದ ಹೊರಹೊಮ್ಮುತ್ತಿರುವ ಶಕ್ತಿಶಾಲಿ ಬೆಳಕಿನ ಕಿರಣಗಳಿಂದ ರಾತ್ರಿ ಹೊತ್ತು ನಿದ್ರಿಸಲಾಗುತ್ತಿಲ್ಲವೆಂದು ದೂರಿದ್ದಾರೆ. ಎಲಾನ್ ಮಸ್ಕ್ ಮಾಲಕತ್ವದ ಈ ಕಂಪನಿಯು ಬೃಹತ್ ಎಕ್ಸ್ ಲಾಂಛನವನ್ನು ತನ್ನ ಮುಖ್ಯ ಕಚೇರಿಯ ಮೇಲಿಂದ ತೂಗು ಬಿಟ್ಟಿದ್ದು, ರಾತ್ರಿ ಪೂರಾ ಅದರಿಂದ ಶಕ್ತಿಶಾಲಿ ಬೆಳಕು ಹೊರಹೊಮ್ಮುತ್ತಿದೆ. ಸದ್ಯ ಆ ಕಟ್ಟಡದ ನೆರೆಹೊರೆಯಲ್ಲಿ ವಾಸಿಸುತ್ತಿರುವವರು ಆ ಬೆಳಕಿನಿಂದ ತಪ್ಪಿಸಿಕೊಳ್ಳಲು ತಮ್ಮ ಮನೆಯ ಕಿಟಕಿಗಳಿಗೆ ಪರದೆಗಳನ್ನು ಖರೀದಿಸಲು ಚಿಂತಿಸುತ್ತಿದ್ದಾರೆ ಎಂದು ianslive.com ವರದಿ ಮಾಡಿದೆ.
"ಇನ್ನು ಕನಸುಗಳಿಲ್ಲ. ಇದು ನನ್ನ ಈಗಿನ ಬದುಕು" ಎಂದು ಎಕ್ಸ್ ಮುಖ್ಯ ಕಚೇರಿಯ ನೆರೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬ ಆ ಲಾಂಛನದ ಕಿರು ವಿಡಿಯೊವನ್ನು ರಾತ್ರಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಅಲವತ್ತುಕೊಂಡಿದ್ದಾರೆ.
ಮತ್ತೊಬ್ಬ ಬಳಕೆದಾರರು, "ನಾನು ವ್ಯಗ್ರಗೊಂಡಿದ್ದೇನೆ. ಈ ಎಕ್ಸ್ ಲಾಂಛನ ನಿಮ್ಮ ಮಲಗುವ ಕೋಣೆಯ ಸಮೀಪವೇ ಇರುವುದನ್ನು ಕಲ್ಪಿಸಿಕೊಳ್ಳಿ" ಎಂದು ಅಸಮಾಧಾನ ಹೊರಹಾಕಿದ್ದಾರೆ.
"ನಾನು ಈ ನಗರದಲ್ಲಿ ವಾಸಿಸುವುದನ್ನು ಮತ್ತು ಇದರೊಂದಿಗೆ ಬಂದಿರುವ ಎಲ್ಲವನ್ನೂ ಇಷ್ಟಪಡುತ್ತೇನೆ. ನಾನು ಬೀದಿ ದೀಪಗಳನ್ನು, ಕರೆಗಂಟೆಗಳನ್ನು, ಕೈಗಾಡಿಯ ಶಬ್ದವನ್ನು ಇಷ್ಟಪಡುತ್ತೇನೆ. ಅದರೆ, ಈ ಮೂರ್ಖತನದ ಮರಳು ಚೀಲದಂಥ ಸೌರ ದೀಪವು ಸಹಜವೂ ಅಲ್ಲ ಅಥವಾ ಒಳ್ಳೆಯದೂ ಅಲ್ಲ" ಎಂದು ಮತ್ತೊಬ್ಬ ಎಕ್ಸ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಆದರೆ, ಈ ಕುರಿತು ರವಿವಾರ ಸ್ಪಷ್ಟನೆ ನೀಡಿರುವ ಎಲಾನ್ ಮಸ್ಕ್, ಎಕ್ಸ್ ಕಂಪನಿಯು ಸ್ಯಾನ್ ಫ್ರಾನ್ಸಿಸ್ಕೊ ತೊರೆಯುವುದಿಲ್ಲವೆಂದು ಹೇಳಿದ್ದಾರೆ. "ಹಲವಾರು ಮಂದಿ ಎಕ್ಸ್ ಮುಖ್ಯ ಕಚೇರಿಯನ್ನು ಸ್ಯಾನ್ ಫ್ರಾನ್ಸಿಸ್ಕೊದಿಂದ ಬೇರೆಡೆಗೆ ಸ್ಥಳಾಂತರಿಸಲು ಉತ್ತಮ ಭತ್ಯೆಯ ಆಮಿಷವೊಡ್ಡಿದ್ದಾರೆ. ಇದಲ್ಲದೆ, ಈ ನಗರವು ಹಿಮ್ಮುಖ ಚಲನೆಯಲ್ಲಿದ್ದು, ಈ ನಗರದಿಂದ ಒಂದರ ನಂತರ ಮತ್ತೊಂದು ಕಂಪನಿಗಳು ತೊರೆದಿವೆ ಅಥವಾ ತೊರೆಯುತ್ತಿವೆ. ಹೀಗಾಗಿ, ಅವರು ಎಕ್ಸ್ ಮುಖ್ಯ ಕಚೇರಿಯೂ ಸ್ಥಳಾಂತರಗೊಳ್ಳಬೇಕು ಎಂದು ಬಯಸುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
"ನಾವು ಸ್ಥಳಾಂತರಗೊಳ್ಳುವುದಿಲ್ಲ. ನೀವು ಕುಗ್ಗಿದ್ದಾಗಲೇ ನಿಮ್ಮ ನಿಜ ಗೆಳೆಯರು ಯಾರು ಎಂದು ತಿಳಿಯುವುದು. ಸ್ಯಾನ್ ಫ್ರಾನ್ಸಿಸ್ಕೊ, ಸುಂದರ ಸ್ಯಾನ್ ಫ್ರಾನ್ಸಿಸ್ಕೊ, ಬೇರೆಯವರು ನಿನ್ನನ್ನು ತೊರೆದರೂ, ನಾವು ಯಾವಾಗಲೂ ನಿನ್ನ ಗೆಳೆಯರಾಗಿರುತ್ತೇವೆ" ಎಂದು ಹೇಳಿಕೊಂಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊ ಮುಖ್ಯ ಕಚೇರಿಯ ಬಾಡಿಗೆ ಪಾವತಿಸದ ಕಾರಣ, ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಟ್ವಿಟರ್ ವಿರುದ್ಧ 136,250 ಡಾಲರ್ ಪರಿಹಾರಕ್ಕಾಗಿ ದಾವೆ ಹೂಡಲಾಗಿತ್ತು.







