ಭಾರತೀಯ ವಸ್ತುಗಳಿಗೆ ಸುಂಕ: ನೇಪಾಳದಲ್ಲಿ ಪ್ರತಿಭಟನೆ

Photo Credit : PTI
ಕಠ್ಮಂಡು, ಎ. 20: ಭಾರತದಿಂದ ತರುವ ನೂರು ನೇಪಾಳಿ ರೂಪಾಯಿ (63 ಭಾರತೀಯ ರೂಪಾಯಿ)ಗಿಂತ ಹೆಚ್ಚಿನ ಬೆಲೆಯ ವಸ್ತುಗಳಿಗೆ ಕಸ್ಟಮ್ಸ್ ಸುಂಕ ವಿಧಿಸುವ ನೇಪಾಳ ಸರಕಾರದ ಆದೇಶದ ವಿರುದ್ಧ ಭಾರತದೊಂದಿಗೆ ಗಡಿ ಹೊಂದಿರುವ ಬೀರ್ಗಂಜ್ ಪಟ್ಟಣದಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸರಕಾರದ ಈ ಆದೇಶದಿಂದಾಗಿ ದೈನಂದಿನ ಅಗತ್ಯ ವಸ್ತುಗಳ ವೆಚ್ಚವು ಗಣನೀಯವಾಗಿ ಏರಿಕೆಯಾಗಿದೆ ಹಾಗೂ ಆದೇಶವು ಸಾಂಪ್ರದಾಯಿಕ ಗಡಿಯಾಚೆಯ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಕಂದಾಯ ಸೋರಿಕೆ ಮತ್ತು ಅನೌಪಚಾರಿಕ ಆಮದುಗಳನ್ನು ತಡೆಯುವ ದೃಷ್ಟಿಯಿಂದ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಭದ್ರತಾ ಸಂಸ್ಥೆಗಳು ನೇಪಾಳದ ದಕ್ಷಿಣದ ಗಡಿಯಲ್ಲಿ ತಪಾಸಣೆಯನ್ನು ಹೆಚ್ಚಿಸಿದ ಬಳಿಕ ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದಾರೆ.
ನೇಪಾಳದ ಗಡಿಯಲ್ಲಿ ವಾಸಿಸುತ್ತಿರುವ ಜನರು ಆಹಾರ ವಸ್ತುಗಳು, ಬಟ್ಟೆ, ರಸಗೊಬ್ಬರ ಮತ್ತು ದಿನಬಳಕೆಯ ವಸ್ತುಗಳ ಖರೀದಿಗಾಗಿ ಭಾರತೀಯ ಮಾರುಕಟ್ಟೆಗಳಿಗೆ ಆಗಾಗ ಹೋಗುತ್ತಿರುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಈ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿವೆ ಹಾಗೂ ಕಡಿಮೆ ಬೆಲೆಗೆ ಸಿಗುತ್ತವೆ ಎನ್ನುವುದು ಅವರ ವಾದವಾಗಿದೆ.




