ನೇಪಾಳ | ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ಬಾಲೆನ್ ಶಾ ಸರಕಾರದ ವಿರುದ್ಧ ಭುಗಿಲೆದ್ದ ಪ್ರತಿಭಟನೆ

ಬಾಲೆನ್ ಶಾ | Photo Credit : PTI
ಕಠ್ಮಂಡು: ನೇಪಾಳದಲ್ಲಿ ಬಾಲೆನ್ ಶಾ ನೇತೃತ್ವದ ಸರಕಾರ ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದೆ ಎಂದು ವರದಿಯಾಗಿದೆ.
ಪ್ರತಿಭಟನೆಗಳು ಬೀದಿಗಳಿಂದ ದೇಶದ ಆಡಳಿತ ಕೇಂದ್ರವಾದ ಸಿಂಘಾ ದರ್ಬಾರ್ವರೆಗೂ ತಲುಪಿದೆ. ವಿದ್ಯಾರ್ಥಿಗಳು, ರಾಜಕೀಯ ಗುಂಪುಗಳು ಮತ್ತು ಸಾಮಾನ್ಯ ನಾಗರಿಕರು ಸೇರಿದಂತೆ ಪ್ರತಿಭಟನಾಕಾರರು ಕಠ್ಮಂಡು ಮತ್ತು ಇತರ ನಗರಗಳಲ್ಲಿ ಬೀದಿಗಿಳಿದಿದ್ದಾರೆ.
ಭಾರತದಿಂದ ತರುವ 10ರೂ.ಗಿಂತ ಹೆಚ್ಚಿನ ಮೌಲ್ಯದ ಸರಕುಗಳ ಮೇಲೆ ಕಡ್ಡಾಯ ಕಸ್ಟಮ್ಸ್ ಸುಂಕವನ್ನು ವಿಧಿಸಲು ನೇಪಾಳ ಸರಕಾರ ನಿರ್ಧರಿಸಿರುವುದು ಪ್ರತಿಭಟನೆಗೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.
ಗಡಿ ಪ್ರದೇಶಗಳ ನಿವಾಸಿಗಳು ಈ ಕ್ರಮವು ತಮ್ಮ ದೈನಂದಿನ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಏಕೆಂದರೆ ಅವರು ಅಗತ್ಯ ವಸ್ತುಗಳಿಗಾಗಿ ಗಡಿಯಾಚೆಗಿನ ಖರೀದಿ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ನೀತಿಯು ಸಾಮಾನ್ಯ ನಾಗರಿಕರ ಮೇಲೆ ಅನಗತ್ಯ ಆರ್ಥಿಕ ಹೊರೆಯನ್ನು ಹೇರುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.




