Nepal | ದಿಢೀರ್ ಪ್ರವಾಹ; ಉತ್ತರ ಪ್ರದೇಶ, ಬಿಹಾರದಲ್ಲಿ ಕಟ್ಟೆಚ್ಚರ

Photo Credit: ndtv
ಪಾಟ್ನಾ, ಆ. 26: ನೇಪಾಳದಲ್ಲಿ ದಿಢೀರ್ ಪ್ರವಾಹದಿಂದಾಗಿ ಗಂಡಕಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಸಂಭಾವ್ಯ ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳು ಸಿದ್ಧತೆಗಳನ್ನು ತೀವ್ರಗೊಳಿಸಿದ್ದಾರೆ.
ದಿಢೀರ್ ಪ್ರವಾಹಕ್ಕೆ ತುತ್ತಾಗಿರುವ ಗಂಡಕಿ ಹಾಗೂ ಕೋಸಿ ಸೇರಿದಂತೆ ನೇಪಾಳದಿಂದ ಬಿಹಾರಕ್ಕೆ ಹಲವಾರು ನದಿಗಳು ಹರಿಯುತ್ತಿವೆ. ಹಿಮಾಲಯ ಪರ್ವತಶ್ರೇಣಿಗಳು ಹಾಗೂ ಟಿಬೆಟ್ ನಲ್ಲಿ ಜನಿಸುವ ಈ ನದಿಗಳು ಬಿಹಾರದ ಮೂಲಕ ಭಾರತದ ಪ್ರಸ್ಥಭೂಮಿಯನ್ನು ಪ್ರವೇಶಿಸುತ್ತವೆ.
ನೇಪಾಳದಲ್ಲಿ ದಿಢೀರ್ ಪ್ರವಾಹವುಂಟಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಮೇಲೆ ನಿಗಾವಿರಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆಯೆಂದು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧುರಿ ಅವರು ತಿಳಿಸಿದ್ದಾರೆ.
ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರು ನಿಗಾವಿರಿಸಲಿದ್ದಾರೆ ಹಾಗೂ ತಾನು ತಕ್ಷಣವೇ ಈ ಬಗ್ಗೆ ಸಭೆಯೊಂದನ್ನು ನಡೆಸುವುದಾಗಿ ಅವರು ತಿಳಿಸಿದ್ದಾರೆ. ಅಗತ್ಯವಿದ್ದಲ್ಲಿ, ಬಾಧಿತ ಪ್ರದೇಶಗಳಿಗೆ ತಾನು ತೆರಳಲಿದ್ದೇನೆಂದು ಅವರು ಹೇಳಿದ್ದಾರೆ.
ಸಂಭಾವ್ಯ ನೆರೆ ಪರಿಸ್ಥಿತಿಯನ್ನು ಎದುರಿಸಲು ಬಿಹಾರವನ್ನು ಸನ್ನದ್ಧಗೊಳಿಸುವ ಬಗ್ಗೆ ಅಮಿತ್ ಶಾ ಅವರು ಮುಖ್ಯಮಂತ್ರಿ ಸಾಮ್ರಾಟ್ ಚೌಧುರಿ ಜೊತೆ ಮಾತುಕತೆ ನಡೆಸಿದ್ದಾರೆ.
ನೇಪಾಳದಿಂದ ಹರಿದುಬರುವ ಗಂಡಕಿ ಹಾಗೂ ನಾರಾಣಿ ನದಿಗಳಲ್ಲಿ ನೀರಿನ ಮಟ್ಟದಲ್ಲಿ ತೀವ್ರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಮಹಾರಾಜಗಂಜ್ ಹಾಗೂ ಕುಶಿನಗರ ಜಿಲ್ಲೆಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆಯೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ತಿಳಿಸಿದ್ದಾರೆ.
ಗಂಡಕಿ, ಘಾಗರಾ, ಶಾರದಾ (ಕಾಳಿ) ಹಾಗೂ ರಪ್ತಿ ನೇಪಾಳದಿಂದ ಉತ್ತರಪ್ರದೇಶಕ್ಕೆ ಹರಿಯುವ ನದಿಗಳಾಗಿವೆ.
ನೇಪಾಳದ ರಸುವಾ ಜಿಲ್ಲೆಯಲ್ಲಿ ಬುಧವಾರ ಉಂಟಾದ ದಿಢೀರ್ ಪ್ರವಾಹದಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. ಭಾರತೀಯರು ಸೇರಿದಂತೆ 105ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.






