Nepal ಪ್ರವಾಹ | ಮೃತರ ಸಂಖ್ಯೆ 1,243ಕ್ಕೆ ಏರಿಕೆ; ನಾಪತ್ತೆಯಾಗಿರುವ ಸಾವಿರಾರು ಮಂದಿಯ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಸಂಬಂಧಿಕರು

Photo credit: PTI
ಕಠ್ಮಂಡು: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಗುರುವಾರ 1,243ಕ್ಕೆ ಏರಿಕೆಯಾಗಿದೆ. ಭಾರಿ ಮಳೆಯಿಂದಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. ಭೊಟೆಕೋಶಿ ನದಿಯಗುಂಟ ಇರುವ ಭೂಗತ ವಿದ್ಯುಚ್ಛಕ್ತಿ ಸೌಕರ್ಯಗಳ ಸುರಂಗಗಳಲ್ಲಿ ಸಿಲುಕಿಕೊಂಡಿದ್ದಾರೆನ್ನಲಾದ ಕಾರ್ಮಿಕರ ಶೋಧ ಕಾರ್ಯಾಚರಣೆಗೆ ಭಾರಿ ಪ್ರಮಾಣದ ಅವಶೇಷಗಳು ತೊಡಕನ್ನುಂಟು ಮಾಡಿವೆ.
ಈ ದುರಂತಕ್ಕೆ ಹವಾಮಾನ ಬದಲಾವಣೆ ಕಾರಣ ಎಂಬ ಸಂಗತಿಯನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಪ್ರಸ್ತಾಪಿಸಬೇಕಿದೆ ಎಂದು ಪ್ರಧಾನಿ ಬಲೇಂದ್ರ ಶಾ ಹೇಳಿದ್ದಾರೆ. ಈ ನಡುವೆ, ಕಳೆದ ವಾರದಿಂದ ನಾಪತ್ತೆಯಾಗಿರುವವರ ಕುಟುಂಬದ ಸದಸ್ಯರು ಅವರ ಸ್ಮರಣಾರ್ಥ ಸಾಂಕೇತಿಕ ಅಂತ್ಯಕ್ರಿಯೆಗಳನ್ನು ನಡೆಸಿದ್ದಾರೆ.
ದಿನದ ಇಪ್ಪತ್ತನಾಲ್ಕು ಗಂಟೆಯೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಮೃತ ವ್ಯಕ್ತಿಗಳ ಅಂತ್ಯಕ್ರಿಯೆ ನಡೆಸುವುದನ್ನು ಪ್ರಾರಂಭಿಸಲಾಗಿದೆ ಎಂದು ಕಠ್ಮಂಡುವಿನಲ್ಲಿ ಐದನೆಯ ಬಾರಿ ಪತ್ರಿಕಾ ವಿವರಣೆ ನೀಡಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಲೋಕ್ ಬಹದ್ದೂರ್ ಛೆಟ್ರಿ ತಿಳಿಸಿದ್ದಾರೆ.
ಈವರೆಗೆ 11,993 ಮಂದಿಯನ್ನು ರಕ್ಷಿಸಲಾಗಿದ್ದು, ಸುಮಾರು 3,900 ಮಂದಿ ನಾಪತ್ತೆಯಾಗಿದ್ದಾರೆ. ಯಾವೆಲ್ಲ ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ ಅವರ ಗುರುತು ಪತ್ತೆ ಹಚ್ಚಲು ನೆರವಾಗಲು ಅವರ ಸಂಬಂಧಿಕರು ಮಹಾರಾಜ್ ಗಂಜ್ ನಲ್ಲಿರುವ ನೇಪಾಳ ಪೊಲೀಸ್ ಆಸ್ಪತ್ರೆ ಅಥವಾ ಸಮೀಪದ ಜಿಲ್ಲಾ ಪೊಲೀಸ್ ಕಚೇರಿಗಳಲ್ಲಿ ತಮ್ಮ ಡಿಎನ್ಎ ಮಾದರಿಗಳನ್ನು ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.






