ನೇಪಾಳ ಪ್ರವಾಹ | ಮೃತರ ಸಂಖ್ಯೆ 1,127ಕ್ಕೆ ಏರಿಕೆ; 4800ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ

Photo credit: PTI
ಕಠ್ಮಂಡು: ಕಳೆದ ವಾರ ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 1,127ಕ್ಕೆ ಏರಿಕೆಯಾಗಿದೆ. ಈಗಲೂ 4,858 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಬುಧವಾರ ನೇಪಾಳ ಪೊಲೀಸರು ತಿಳಿಸಿದ್ದಾರೆ.
ಇಲ್ಲಿಯವರೆಗೆ ಪತ್ತೆಯಾದ 1,127 ಮೃತದೇಹಗಳ ಪೈಕಿ, 1,113 ಮೃತದೇಹಗಳ ಮರಣೋತ್ತ ಪರೀಕ್ಷೆ ಹಾಗೂ ಕಾನೂನಾತ್ಮಕ ವಿಧಿವಿಧಾನಗಳನ್ನು ಪೂರೈಸಲಾಗಿದೆ. ಈ ಪೈಕಿ 95 ಮೃತದೇಹಗಳನ್ನು ಸಂಬಂಧಿತ ಕುಟುಂಬಗಳ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ಉಳಿದ ಮೃತದೇಹಗಳ ಸಂಬಂಧಿಕರನ್ನು ಪತ್ತೆ ಹಚ್ಚಲು ನೇಪಾಳ ಪೊಲೀಸರು 911 ಮೃತರ ಗುರುತುಗಳನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ರಕ್ಷಣಾ ಪಡೆಗಳು ಪ್ರವಾಹ ಪೀಡಿತ ಪ್ರದೇಶಗಳಿಂದ ಈವರೆಗೆ 6,541 ಮಂದಿಯನ್ನು ರಕ್ಷಿಸಿದ್ದು, ಶೋಧ ಮತ್ತು ರಕ್ಷಣೆ, ಪರಿಹಾರ ಮತ್ತು ಪತ್ತೆಯಾಗಿರುವ ಮೃತದೇಹಗಳ ನಿರ್ವಹಣೆಗಾಗಿ 7,912 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ದುರ್ಬಲ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಕುಟುಂಬಗಳನ್ನು ಪತ್ತೆ ಹಚ್ಚಲೂ ಪೊಲೀಸ್ ತಂಡಗಳು ಪ್ರಯತ್ನ ಮುಂದುವರಿಸಿದ್ದು, ಅವಶೇಷಗಳಿಂದ ಮುಚ್ಚಿಹೋಗಿದ್ದ ರಸ್ತೆಗಳನ್ನು ತೆರವುಗೊಳಿಸಿದ್ದಾರೆ. ಇದರೊಂದಿಗೆ ಸ್ಥಳೀಯ ಪ್ರಾಧಿಕಾರಗಳು ಹಾಗೂ ನಿವಾಸಿಗಳ ಸಮನ್ವಯದೊಂದಿಗೆ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ.






