ನೇಪಾಳ ಪ್ರವಾಹ | ಮೃತರ ಸಂಖ್ಯೆ 768ಕ್ಕೆ ಏರಿಕೆ: ಹೊಸ ಪ್ರವಾಹದ ಭೀತಿ ಹೆಚ್ಚಳ

Photo Credit : PTI
ಕಠ್ಮಂಡು: ನೇಪಾಳದಲ್ಲಿ ವಿನಾಶಕಾರಿ ಪ್ರವಾಹ ಅಪ್ಪಳಿಸಿದ ಕೆಲವು ದಿನಗಳ ನಂತರ, ರವಿವಾರ ಭೋಟೇಕೋಶಿ ನದಿಯಲ್ಲಿ ನೀರಿನ ಮಟ್ಟ ಮತ್ತೆ ಏರಿಕೆಯಾದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಸ್ಥಿತಿ ಮುಂದುವರಿದಿದೆ. ಮಳೆ ಮತ್ತು ಹೊಸ ಪ್ರವಾಹದ ಭೀತಿಯ ನಡುವೆಯೂ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಸಂತ್ರಸ್ತ ಜಿಲ್ಲೆಗಳ ನಿವಾಸಿಗಳು ಮತ್ತು ರಕ್ಷಣಾ ತಂಡಗಳು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಆಗಸ್ಟ್ 26ರ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 768ಕ್ಕೆ ಏರಿಕೆಯಾಗಿದೆ ಹಾಗೂ 2,500ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಈ ಮಧ್ಯೆ, ಭೋಟೇಕೋಶಿ ನದಿ ಮತ್ತೆ ಉಕ್ಕಿ ಹರಿಯುತ್ತಿದ್ದು ಸಂಬಂಧಪಟ್ಟ ಎಲ್ಲರೂ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಾಧಿಕಾರ ಸೂಚನೆ ನೀಡಿದೆ.
ನೇಪಾಳದಲ್ಲಿ 320 ವಿದೇಶಿಯರು ಸೇರಿದಂತೆ ಒಟ್ಟು 2,502 ಜನರು ಇನ್ನೂ ನಾಪತ್ತೆಯಾಗಿದ್ದಾರೆ. 275ಕ್ಕೂ ಹೆಚ್ಚು ಭಾರತೀಯರು ಮತ್ತು ಭಾರತೀಯ ಮೂಲದ 128 ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ ಅಥವಾ ಸಂಪರ್ಕಕ್ಕೆ ಸಿಗುತ್ತಿಲ್ಲ, ಹಾಗೂ 108 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಪಾಳದ ಶಿಕ್ಷಣ ಸಚಿವಾಲಯದ ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರವಾಹ ಪೀಡಿತ ಮೂರು ಜಿಲ್ಲೆಗಳ ಶಾಲೆಗಳಿಂದ 238 ವಿದ್ಯಾರ್ಥಿಗಳು ಮತ್ತು 18 ಶಿಕ್ಷಕರು ಸಹ ನಾಪತ್ತೆಯಾದವರಲ್ಲಿ ಸೇರಿದ್ದಾರೆ ಎಂದು ವರದಿಯಾಗಿದೆ.
ವಿಧಿವಿಜ್ಞಾನ ತಜ್ಞರನ್ನು ಕಳುಹಿಸಿದ ಭಾರತ
ದುರಂತ ಪೀಡಿತ ದೇಶಕ್ಕೆ ಮೊದಲಿಗೆ ಪರಿಹಾರ ಸಾಮಗ್ರಿ ಮತ್ತು ನೆರವು ನೀಡಿದ ಪ್ರಮುಖ ದೇಶಗಳಲ್ಲಿ ಒಂದಾದ ಭಾರತ, ಇದೀಗ ಡಿಎನ್ಎ ಮಾದರಿಗಳನ್ನು ವಿಶ್ಲೇಷಿಸಲು ಮತ್ತು ಸಂತ್ರಸ್ತರನ್ನು ಗುರುತಿಸಲು ಸಹಾಯ ಮಾಡಲು ವಿಧಿವಿಜ್ಞಾನ (ಫೊರೆನ್ಸಿಕ್) ತಜ್ಞರ ತಂಡವನ್ನು ನೇಪಾಳಕ್ಕೆ ಕಳುಹಿಸುತ್ತಿದೆ.
ಈ ತಂಡವು ನೇಪಾಳದ ತಮ್ಮ ಸಹವರ್ತಿಗಳೊಂದಿಗೆ ಸೇರಿ ಡಿಎನ್ಎ ಮಾದರಿಗಳನ್ನು ವಿಶ್ಲೇಷಿಸುವ ಮೂಲಕ ಪ್ರವಾಹ ಸಂತ್ರಸ್ತರ ಮೃತದೇಹಗಳನ್ನು ಗುರುತಿಸಲು ನೆರವಾಗಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.






