ನೇಪಾಳ ಪ್ರವಾಹ | ಜಲವಿದ್ಯುತ್ ಯೋಜನೆ ಸುರಂಗದಲ್ಲಿ ಸಿಲುಕಿರುವವರ ರಕ್ಷಣೆಗೆ `ಡ್ರಿಲ್ಲಿಂಗ್' ಕಾರ್ಯಾಚರಣೆ

Photo credit: PTI
ಕಠ್ಮಂಡು: ಭೀಕರ ಪ್ರವಾಹ ಅಪ್ಪಳಿಸಿದ ಮೂರು ದಿನಗಳ ನಂತರ, ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಸಿಲುಕಿರುವ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಲು ನೇಪಾಳಿ ಸೇನೆಯ ರಕ್ಷಣಾ ತಂಡಗಳು ಶನಿವಾರ ಡ್ರಿಲ್ಲಿಂಗ್ ಉಪಕರಣಗಳನ್ನು ಬಳಸಿ ಕಾರ್ಯಾಚರಣೆ ನಡೆಸುತ್ತಿವೆ.
ರಸುವಾದಲ್ಲಿರುವ ತ್ರಿಶೂಲಿ 3ಂ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಸಿಲುಕಿರುವ ಜನರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ. ಈ ಪ್ರಯತ್ನಗಳ ಭಾಗವಾಗಿ, ಶನಿವಾರ ಮುಂಜಾನೆಯಿಂದಲೇ ಸುರಂಗದ ಪ್ರವೇಶ ದ್ವಾರವನ್ನು ತೆರವುಗೊಳಿಸುವ ಕೆಲಸವನ್ನು ಚುರುಕುಗೊಳಿಸಲಾಗಿದೆ ಎಂದು ನೇಪಾಳದ ಪ್ರಧಾನಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಧಾನಿ ಕಚೇರಿ ಹಂಚಿಕೊಂಡಿರುವ ಛಾಯಾಚಿತ್ರಗಳಲ್ಲಿ, ಕೆಲಸಗಾರರು ಕೆಸರಿನಲ್ಲಿ ನಡೆದುಕೊಂಡು ಹೋಗುತ್ತಾ ಹಾಗೂ ಪ್ರವಾಹದಿಂದ ಕೊಚ್ಚಿಕೊಂಡು ಬಂದಿರುವ ಬೃಹತ್ ಬಂಡೆಗಳನ್ನು ತೆರವುಗೊಳಿಸುತ್ತಿರುವುದು ಕಂಡುಬಂದಿದೆ.
ಸುರಂಗದ ಪ್ರವೇಶ ದ್ವಾರವನ್ನು ಅಗೆದು ತೆರವುಗೊಳಿಸಲು ಸೇನೆ ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 82 ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಸುರಂಗದ ಹೊರಭಾಗವನ್ನು ಪತ್ತೆಹಚ್ಚಲು ಡ್ರಿಲ್ಲಿಂಗ್ ಯಂತ್ರಗಳು ಸೇರಿದಂತೆ ವಿವಿಧ ಉಪಕರಣಗಳನ್ನು ಬಳಸಲಾಗುತ್ತಿದೆ. ಆದರೆ, ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ರಕ್ಷಣಾ ಕಾರ್ಯಾಚರಣೆ ಅತ್ಯಂತ ಸವಾಲಿನಿಂದ ಕೂಡಿದೆ ಎಂದು ಪ್ರಕಟಣೆ ತಿಳಿಸಿದೆ.
ನೇಪಾಳದ ವಿನಂತಿಯ ಮೇರೆಗೆ ಭಾರತವು ವಿಶೇಷ ಸುರಂಗ ರಕ್ಷಣಾ ತಂಡವನ್ನು ಕಳುಹಿಸಿಕೊಟ್ಟಿದ್ದು, ಆ ತಂಡವು ತ್ರಿಶೂಲಿ ತಲುಪಿದೆ. ಈ ತಂಡವು ಮೊದಲು ಪ್ರಾಥಮಿಕ ವೈಮಾನಿಕ ಸಮೀಕ್ಷೆ ನಡೆಸಲಿದೆ ಎಂದು ನೇಪಾಳ ಪ್ರಧಾನಿ ಕಚೇರಿ ತಿಳಿಸಿದೆ.






