ನೇಪಾಳ ಪ್ರವಾಹ | ಗುರುತು ಸಿಗದ ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರ

Photo Credit : PTI
ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಸರಣಿ ಪ್ರವಾಹವು ತೀವ್ರ ವಿನಾಶವನ್ನು ಉಂಟುಮಾಡಿದ್ದು ರಕ್ಷಣಾ ಸಿಬ್ಬಂದಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಶವಗಾರಗಳು ಮತ್ತು ಪರಿಹಾರ ಕೇಂದ್ರಗಳು ಭರ್ತಿಯಾಗಿದ್ದು, ಕೊಳೆಯಲು ಪ್ರಾರಂಭಿಸಿದ್ದ ನೂರಾರು ಗುರುತು ಸಿಗದ ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರವನ್ನು ಅಧಿಕಾರಿಗಳು ಪ್ರಾರಂಭಿಸಿದ್ದಾರೆ ಎಂದು `ರಾಯ್ಟರ್ಸ್' ವರದಿ ಮಾಡಿದೆ.
ಭವಿಷ್ಯದ ಗುರುತಿಸುವಿಕೆಗಾಗಿ, ಅಂತ್ಯಸಂಸ್ಕಾರಕ್ಕೂ ಮುನ್ನ ಅಧಿಕಾರಿಗಳು ಡಿಎನ್ಎ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ, ದೇಹಗಳ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ವಿಶೇಷ ಗುರುತುಗಳನ್ನು ದಾಖಲಿಸುತ್ತಿದ್ದಾರೆ. ಪತ್ತೆಯಾಗಿರುವ ಮೃತದೇಹಗಳಲ್ಲಿ 50%ದಷ್ಟು ಮೃತದೇಹಗಳು ಗುರುತಿಸಲಾಗದ ಸ್ಥಿತಿಯಲ್ಲಿವೆ. ಕೆಲವು ಪ್ರಕರಣಗಳಲ್ಲಿ ಕೈಗಳು ಅಥವಾ ಕಾಲುಗಳು ಮಾತ್ರ ಉಳಿದಿದ್ದರೆ, ಇನ್ನು ಕೆಲವೆಡೆ ದೇಹದ ಕೆಲವು ಭಾಗಗಳು ಮಾತ್ರ ಲಭ್ಯವಾಗಿವೆ. ಹಲವು ಮೃತದೇಹದ ತಲೆಯ ಅರ್ಧಕ್ಕಿಂತ ಹೆಚ್ಚು ಭಾಗ ನಾಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಅನಿಲ್ ಥಾಪಾ ತಿಳಿಸಿದ್ದಾರೆ.
ಅಧಿಕಾರಿಗಳು ಶನಿವಾರ 100ಕ್ಕೂ ಹೆಚ್ಚು ಗುರುತು ಸಿಗದ ಮೃತದೇಹಗಳನ್ನು ಸಮಾಧಿ ಮಾಡಿದ್ದಾರೆ. ಈ ದುರಂತದಿಂದ 90,000ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ರೆಡ್ ಕ್ರಾಸ್ ಅಂದಾಜಿಸಿದೆ.




