ಭಾರತದಿಂದ ಹವಾಮಾನ ಪರಿಹಾರ ಕೇಳಿಲ್ಲ: ನೇಪಾಳ ಸರಕಾರ ಸ್ಪಷ್ಟನೆ

Photo Credit : ANI
ಕಠ್ಮಂಡು: ಭೀಕರ ಪ್ರವಾಹದ ನಂತರ ನೇಪಾಳವು ಭಾರತದಿಂದ ಹವಾಮಾನ ಪರಿಹಾರ ಕೋರಿದೆ ಎಂಬ ವರದಿಗಳನ್ನು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖಾನಾಲ್ ತಳ್ಳಿ ಹಾಕಿದ್ದಾರೆ.
ನೇಪಾಳ ಸರಕಾರದ ಯಾರೊಬ್ಬರೂ ಭಾರತದಿಂದಾಗಲಿ ಅಥವಾ ಚೀನಾ, ಅಮೆರಿಕ ಸೇರಿದಂತೆ ಯಾವುದೇ ಇತರ ದೇಶದಿಂದಾಗಲಿ ಪರಿಹಾರವನ್ನು ಕೇಳಿಲ್ಲ ಅಥವಾ ಪ್ರತಿಪಾದಿಸಿಲ್ಲ ಎಂದು ಖಾನಾಲ್ ಹೇಳಿದ್ದಾರೆ.
`ಚೀನಾ, ಭಾರತ ಮತ್ತು ನೇಪಾಳ ಮೂರೂ ದೇಶಗಳು ಒಂದೇ ರೀತಿಯ ಪರಿಸರ ವ್ಯವಸ್ಥೆಯನ್ನು ಹಂಚಿಕೊಳ್ಳುತ್ತವೆ ಮತ್ತು ಎದುರಿಸುತ್ತವೆ. ಹಿಮಾಲಯದಲ್ಲಿ ನಾವೆಲ್ಲರೂ ಹವಾಮಾನ ವೈಪರೀತ್ಯದಿಂದ ಪ್ರಭಾವಿತರಾಗಿದ್ದೇವೆ. ಈ ಮೂರೂ ದೇಶಗಳು ಒಂದಾಗಿ ಇನ್ನಷ್ಟು ಉತ್ತಮವಾಗಿ ಸಜ್ಜಾಗಬೇಕು ಮತ್ತು ಜಾಗತಿಕ ಸಮುದಾಯವು ನೇಪಾಳದಂತಹ ಸಣ್ಣ ರಾಷ್ಟ್ರಗಳಿಗೆ ಬೆಂಬಲ ನೀಡಬೇಕು. ಈ ವಿಕೋಪವನ್ನು ಕೇವಲ ಒಂದು ಬಾರಿಯ ಘಟನೆ ಅಥವಾ ಬೆಂಬಲವಾಗಿ ನೋಡದೆ, ಜಗತ್ತಿನಾದ್ಯಂತ ಸಮುದಾಯಗಳ ಮೇಲೆ ಏರುತ್ತಿರುವ ತಾಪಮಾನ ಮತ್ತು ಹವಾಮಾನ ವೈಪರೀತ್ಯ ಬೀರುತ್ತಿರುವ ಪ್ರಭಾವದ ಬಗ್ಗೆ ಆಲೋಚಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ' ಎಂದವರು ಹೇಳಿದ್ದಾರೆ.




