ಭಾರತದ ಗಡಿ ಪ್ರದೇಶವನ್ನು ಒಳಗೊಂಡ ನಕ್ಷೆಯೊಂದಿಗೆ ಹೊಸ ಕರೆನ್ಸಿ ಬಿಡುಗಡೆ ಮಾಡಿದ ನೇಪಾಳ!

ಸಾಂದರ್ಭಿಕ ಚಿತ್ರ (Image by wirestock on Freepik)
ಕಠ್ಮಂಡು : ನೇಪಾಳದ ಕೇಂದ್ರ ಬ್ಯಾಂಕ್ ಗುರುವಾರ ಹೊಸ 100 ರೂಪಾಯಿ ಮೌಲ್ಯದ ನೋಟುಗಳನ್ನು ಬಿಡುಗಡೆ ಮಾಡಿದೆ. ಈ ನೋಟಿನಲ್ಲಿ ನೇಪಾಳದ ಹೊಸ ನಕ್ಷೆ ಇದೆ. ಈ ನಕ್ಷೆಯಲ್ಲಿ ಭಾರತದ ಗಡಿ ಭೂಪ್ರದೇಶವಾದ ಕಾಲಾಪಾನಿ, ಲಿಂಪಿಯಾಧುರಾ ಮತ್ತು ಲಿಪುಲೇಖ್ ಪ್ರದೇಶಗಳನ್ನು ನೇಪಾಳದ ಭಾಗವೆಂದು ತೋರಿಸಲಾಗಿದೆ.
ಹೊಸ ನೋಟಿನ ಮೇಲೆ ನೇಪಾಳ ರಾಷ್ಟ್ರ ಬ್ಯಾಂಕಿನ ಮಾಜಿ ಗವರ್ನರ್ ಮಹಾ ಪ್ರಸಾದ್ ಅಧಿಕಾರಿ ಅವರ ಸಹಿ ಇದೆ. ಅವರ ಅಧಿಕಾರವಧಿ ಎಪ್ರಿಲ್ನಲ್ಲಿ ಕೊನೆಗೊಂಡಿತ್ತು. ನೋಟಿನ ಮೇಲಿ ದಿನಾಂಕ ನೇಪಾಳಿ ಕ್ಯಾಲೆಂಡರ್ 2081 ಎಂದು ಮುದ್ರಿತವಾಗಿದೆ. ಅಂದರೆ 2024ಕ್ಕೆ ಸರಿಸಮಾನವಾಗಿದೆ.
ನೇಪಾಳ ಸರಕಾರದ ನಿರ್ಧಾರದಂತೆ ನಕ್ಷೆಯನ್ನು ಬದಲಾಯಿಸಲಾಗಿದೆ ಎಂದು ನೇಪಾಳ ಕೇಂದ್ರ ಬ್ಯಾಂಕ್ ವಕ್ತಾರರು ಹೇಳಿದ್ದಾರೆ. ಆದರೆ 10, 500 ಮತ್ತು 1000 ರೂಪಾಯಿ ನೋಟುಗಳಲ್ಲಿ ಈಗಲೂ ನೇಪಾಳದ ನಕ್ಷೆ ಇಲ್ಲ.
ನೇಪಾಳ-ಭಾರತ ಗಡಿ ವಿವಾದ 2019ರಲ್ಲಿ ಆರಂಭಗೊಂಡಿತ್ತು. ಹೊಸ ನಕ್ಷೆಯಲ್ಲಿ ಕಾಲಾಪಾನಿ ಮತ್ತು ಲಿಪುಲೇಖ್ ಅನ್ನು ಭಾರತದ ಭಾಗವೆಂದು ತೋರಿಸಲಾಗಿತ್ತು. ಇದಕ್ಕೆ ನೇಪಾಳ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ನಾವು ನೇಪಾಳದೊಂದಿಗಿನ ಗಡಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೊಸ ನಕ್ಷೆ ನಮ್ಮ ಭೂಭಾಗವನ್ನು ಸರಿಯಾಗಿ ತೋರಿಸುತ್ತದೆ ಎಂದು ಭಾರತ ಹೇಳಿಕೊಂಡಿತ್ತು.
2020ರ ಮೇ ತಿಂಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಿಪುಲೇಖ್ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೊಸ ರಸ್ತೆ ಉದ್ಘಾಟಿಸಿದರು. ಇದರಿಂದ ವಿವಾದ ಇನ್ನಷ್ಟು ಉಲ್ಬಣಗೊಂಡಿತ್ತು. ಈ ರಸ್ತೆಯು ಎರಡು ದೇಶಗಳ ನಡುವಿನ ಒಪ್ಪಂದವನ್ನು ಉಲ್ಲಂಘಿಸಿದೆ. 1816ರಲ್ಲಿ ಬ್ರಿಟಿಷರೊಂದಿಗೆ ಮಾಡಿಕೊಂಡ ಸುಗೌಲಿ ಒಪ್ಪಂದದ ಆಧಾರದ ಮೇಲೆ ಲಿಪುಲೇಖ್ ತನ್ನದು ಎಂದು ನೇಪಾಳ ಹೇಳಿಕೊಂಡಿತ್ತು.







