ನೇಪಾಳ | ಯುವಜನರ ಪ್ರತಿಭಟನೆಗೆ ಮಣಿದ ಸರಕಾರ ; ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧ ತೆರವು

Photo |bbc
ಕಠ್ಮಂಡು : ವ್ಯಾಪಕ ಪ್ರತಿಭಟನೆ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳ ಮೇಲೆ ವಿಧಿಸಿದ್ದ ನಿಷೇಧವನ್ನು ನೇಪಾಳ ಸರಕಾರ ತೆರವುಗೊಳಿಸಿದೆ.
ನೇಪಾಳ ಸರಕಾರದ ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ಖಂಡಿಸಿ ಯುವಜನರು ನಡೆಸಿದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದು ಕನಿಷ್ಠ 19 ಜನರು ಮೃತಪಟ್ಟಿದ್ದರು.100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಪ್ರತಿಭಟನಾಕಾರರ ಬೇಡಿಕೆಯಂತೆ ಸೋಮವಾರ ತಡರಾತ್ರಿ ನಡೆದ ತುರ್ತು ಕ್ಯಾಬಿನೆಟ್ ಸಭೆಯಲ್ಲಿ ನಿಷೇಧವನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಂವಹನ ಮತ್ತು ಮಾಹಿತಿ ಸಚಿವ ಪೃಥ್ವಿ ಸುಬ್ಬಾ ಗುರುಂಗ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಫೇಸ್ಬುಕ್, ಇನ್ಸ್ಟಾಗ್ರಾಂನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು ನೇಪಾಳದಲ್ಲಿ ಲಕ್ಷಾಂತರ ಬಳಕೆದಾರರನ್ನು ಹೊಂದಿದೆ. ನಕಲಿ ಸುದ್ದಿ, ದ್ವೇಷ ಭಾಷಣ ಮತ್ತು ಆನ್ಲೈನ್ ವಂಚನೆ ತಡೆಯುವ ದೃಷ್ಟಿಯಿಂದ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿರುವುದಾಗಿ ಸರಕಾರ ಹೇಳಿತ್ತು.





