ವಾಯುವ್ಯ ನೇಪಾಳದಲ್ಲಿ ಮೂರು ಗಂಟೆಗಳ ಅಂತರದಲ್ಲಿ ಅವಳಿ ಭೂಕಂಪನ

ಸಾಂದರ್ಭಿಕ ಚಿತ್ರ (PTI)
ಕಠ್ಮಂಡು: ವಾಯುವ್ಯ ನೇಪಾಳದ ಮುಗು ಜಿಲ್ಲೆಯಲ್ಲಿ ಮೂರು ಗಂಟೆಗಳ ಅಂತರದಲ್ಲಿ ಅವಳಿ ಭೂಕಂಪನ ಸಂಭವಿಸಿದೆ. ಆದರೆ, ತಕ್ಷಣಕ್ಕೆ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ವರದಿಯಾಗಿಲ್ಲ.
ನೇಪಾಳ ಭೂಕಂಪ ನಿಗಾವಣೆ ಮತ್ತು ಸಂಶೋಧನಾ ಕೇಂದ್ರದ ಪ್ರಕಾರ, 4.5 ತೀವ್ರತೆಯ ಮೊದಲ ಭೂಕಂಪನ ರಾತ್ರಿ ಸುಮಾರು 1.51 ಗಂಟೆಗೆ ಸಂಭವಿಸಿದ್ದು, 4.2 ತೀವ್ರತೆಯ ಎರಡನೆ ಭೂಕಂಪನ ಮುಂಜಾನೆ 4.28 ಗಂಟೆಗೆ ಸಂಭವಿಸಿದೆ.
ಎರಡೂ ಭೂಕಂಪನಗಳ ಕೇಂದ್ರವು ಮುಗು ಜಿಲ್ಲೆಯ ಕಲಾಯಿ ಸುತ್ತಮುತ್ತ ಕೇಂದ್ರೀಕೃತವಾಗಿತ್ತು ಎಂದು ವರದಿಯಾಗಿದೆ.
ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರವು ಎರಡೂ ಭೂಕಂಪನಗಳನ್ನು ಸ್ವತಂತ್ರವಾಗಿ ದಾಖಲಿಸಿಕೊಂಡಿದ್ದರೂ, ಎರಡನೆ ಭೂಕಂಪನದ ತೀವ್ರತೆ 4.0 ಇತ್ತು ಎಂದು ಹೇಳಿದೆ. ರಾತ್ರಿ ಸುಮಾರು 1.36 ಗಂಟೆಯ ವೇಳೆಗೆ ಉತ್ತರಾಖಂಡದ ಪೂರ್ವ ಪಿಥೋರ್ ಗಢದಿಂದ 159 ಕಿಮೀ ದೂರದಲ್ಲಿ ಹಾಗೂ 81 ಕಿಮೀ ಆಳದಲ್ಲಿ ಮೊದಲನೆ ಭೂಕಂಪನ ಸಂಭವಿಸಿದೆ ಎಂದು ಅದು ತಿಳಿಸಿದೆ.
ಎರಡನೆ ಭೂಕಂಪವು ಭಾರತೀಯ ಕಾಲಮಾನ ಮುಂಜಾನೆ 4.13 ಗಂಟೆಗೆ ದಾಖಲಾಗಿದ್ದು, ಪೂರ್ವ ಪಿಥೋರ್ ಗಢದಿಂದ ಸುಮಾರು 166 ಕಿಮೀ ದೂರದಲ್ಲಿ ಹಾಗೂ 98 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಅದು ಹೇಳಿದೆ.
ಸೆಪ್ಟೆಂಬರ್ 8ರಂದು ಮುಸ್ತಾಂಗ್ ಜಿಲ್ಲೆಯಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದಾದ ಬಳಿಕ, ಸೆಪ್ಟೆಂಬರ್ 9ರಂದು ಅದೇ ಜಿಲ್ಲೆಯಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಎರಡು ಭೂಕಂಪಗಳ ಬಳಿಕ ಸಂಭವಿಸಿರುವ ಇತ್ತೀಚಿನ ಭೂಕಂಪನ ಇದಾಗಿದೆ.






