ನೇಪಾಳ: ನೂತನ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾದ ʼಜೆನ್ ಝೀʼ ಗುಂಪು

File Photo: PTI
ಕಠ್ಮಂಡು: ನೇಪಾಳದಲ್ಲಿ ನೂತನ ರಾಜಕೀಯ ಪಕ್ಷ ಸ್ಥಾಪಿಸಲಾಗುವುದು ಎಂದು ನೇಪಾಳದ ಪ್ರಧಾನಿ ಕೆ.ಪಿ. ಓಲಿ ನೇತೃತ್ವದ ಸರಕಾರದ ಪದಚ್ಯುತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಜೆನ್ ಝೀ ಗುಂಪು ಘೋಷಿಸಿದೆ.
ನೇಪಾಳ ಸಂಸತ್ತಿಗೆ ಮಾರ್ಚ್ 5, 2026ರಂದು ಚುನಾವಣೆ ನಿಗದಿಯಾಗಿದೆ.
ಆಡಳಿತದಲ್ಲಿ ಮಿರಿಮೀರಿದ ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮದ ಮೇಲೆ ಹೇರಿದ ನಿರ್ಬಂಧವನ್ನು ಖಂಡಿಸಿ ಜೆನ್ ಝೀ ಗುಂಪು ಸರಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿತ್ತು. ಇದರಿಂದಾಗಿ, ಕೆ.ಪಿ.ಓಲಿ ನೇತೃತ್ವದ ಸರಕಾರ ಪತನಗೊಂಡಿತ್ತು.
ಬಳಿಕ ರಚನೆಯಾಗಿರುವ ಮಧ್ಯಂತರ ಸರಕಾರದ ಪ್ರಧಾನಿಯಾಗಿ ನೇಪಾಳ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ ಸೆಪ್ಟೆಂಬರ್ 12ರಂದು ಅಧಿಕಾರ ವಹಿಸಿಕೊಂಡಿದ್ದರು.
ಶನಿವಾರ ರಾಷ್ಟ್ರ ರಾಜಧಾನಿ ಕಠ್ಮಂಡುವಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆನ್ ಝೀ ಹೋರಾಟದ ನೇತೃತ್ವ ವಹಿಸಿದ್ದ ಮಿರಾಜ್ ಧುಂಗನಾ, ನಮ್ಮ ಗುಂಪು ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲಿದೆ. ಸರಕಾರದ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದ ಜೆನ್ ಝೀ ಯುವ ಸಮೂಹವನ್ನು ಒಗ್ಗೂಡಿಸಲು ರಾಜಕೀಯ ಪಕ್ಷ ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.
ವಿದೇಶದಲ್ಲಿ ವಾಸಿಸುತ್ತಿರುವ ನೇಪಾಳಿಗರಿಗೆ ಮತದಾನದ ಹಕ್ಕು, ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ನಾಗರಿಕರ ನೇತೃತ್ವದ ತನಿಖಾ ಸಮಿತಿ ರಚನೆ ಹಾಗೂ ಆರ್ಥಿಕ ಪರಿವರ್ತನೆ ನೀತಿಯನ್ನು ಪಕ್ಷದ ಕಾರ್ಯಸೂಚಿಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
“ಭ್ರಷ್ಟಾಚಾರ ರಹಿತ, ಪಾರದರ್ಶಕ, ಉತ್ತಮ ಆಡಳಿತಕ್ಕಾಗಿನ ಹೋರಾಟ ಮುಂದುವರಿಯಲಿದೆ. ಜೆನ್ ಝೀ ಯುವಕರ ತ್ಯಾಗ ವ್ಯರ್ಥವಾಗಲು ಅವಕಾಶ ನೀಡುವುದಿಲ್ಲ” ಎಂದು ಒತ್ತಿ ಹೇಳಿದ ಅವರು, ರಾಷ್ಟ್ರ ನಿರ್ಮಾಣಕ್ಕಾಗಿ ಸಾಮೂಹಿಕ ಬದ್ಧತೆ ಮತ್ತು ಸಹಕಾರಕ್ಕೆ ಕರೆ ನೀಡಿದ್ದಾರೆ.
ಹೊಸ ಪಕ್ಷದ ಹೆಸರಿಗಾಗಿ ಸಮಾಲೋಚನೆ ಮುಂದುವರಿದಿದ್ದು, ಸಲಹೆಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದೂ ಅವರು ಹೇಳಿದ್ದಾರೆ.







