ಶತ್ರುಗಳನ್ನು ಹೊಡೆಯಲು ಇಸ್ರೇಲ್ ಗೆ ಯಾವುದೇ ಅನುಮೋದನೆ ಅಗತ್ಯವಿಲ್ಲ: ನೆತನ್ಯಾಹು

ಬೆಂಜಮಿನ್ ನೆತನ್ಯಾಹು | Photo Credit : PTI
ಟೆಲ್ ಅವೀವ್, ಅ.26: ಕದನ ವಿರಾಮಕ್ಕೆ ಒಪ್ಪಿದ ಹೊರತಾಗಿಯೂ ಗಾಝಾ ಅಥವಾ ಲೆಬನಾನಿನಲ್ಲಿ ಶತ್ರುಗಳ ಮೇಲೆ ದಾಳಿ ನಡೆಸಲು ಇಸ್ರೇಲ್ ಯಾವುದೇ ಅನುಮೋದನೆಗೆ ಕಾಯುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರ ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ಸ್ವತಂತ್ರ ರಾಷ್ಟ್ರ. ನಾವು ನಮ್ಮ ಸ್ವಂತ ವಿಧಾನದಿಂದ ನಮ್ಮನ್ನು ರಕ್ಷಿಸಿಕೊಳ್ಳುತ್ತೇವೆ ಮತ್ತು ನಮ್ಮ ಭವಿಷ್ಯವನ್ನು ನಿರ್ಧರಿಸುವುದನ್ನು ಮುಂದುವರಿಸುತ್ತೇವೆ. ನಮ್ಮ ಭದ್ರತೆಯನ್ನು ನಾವೇ ನಿರ್ವಹಿಸುತ್ತೇವೆ. ಟ್ರಂಪ್ ಶಾಂತಿ ಯೋಜನೆಯ ಪ್ರಕಾರ ಗಾಝಾದಲ್ಲಿ ಯೋಜಿತ ಅಂತರಾಷ್ಟ್ರೀಯ ಪಡೆಯಲ್ಲಿ ಯಾವ ವಿದೇಶಿ ಪಡೆ ಇರಬೇಕು ಎಂಬುದನ್ನು ಇಸ್ರೇಲ್ ನಿರ್ಧರಿಸುತ್ತದೆ. ಇದು ಖಂಡಿತಾ ಅಮೆರಿಕಕ್ಕೂ ಸ್ವೀಕಾರಾರ್ಹವಾಗಿದೆ ' ಎಂದು ಸಚಿವ ಸಂಪುಟದ ಸಭೆಯಲ್ಲಿ ನೆತನ್ಯಾಹು ಹೇಳಿರುವುದಾಗಿ ವರದಿಯಾಗಿದೆ.
ಈ ಮಧ್ಯೆ, ಮಧ್ಯ ಗಾಝಾದಲ್ಲಿ ಇಸ್ರೇಲಿ ಯೋಧರ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದ ವ್ಯಕ್ತಿಯ ಮೇಲೆ ಇಸ್ರೇಲಿ ಪಡೆಗಳು `ಉದ್ದೇಶಿತ ದಾಳಿ' ನಡೆಸಿವೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಕಾರೊಂದಕ್ಕೆ ಡ್ರೋನ್ ಬಡಿದು ಕಾರು ಬೆಂಕಿಗೆ ಆಹುತಿಯಾಗಿದ್ದು ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.





