ಗಾಝಾದಲ್ಲಿ ಪ್ರತಿರಾತ್ರಿ 30–40 ಮಂದಿಯನ್ನು ಹತ್ಯೆ ಮಾಡಿ: ಇಸ್ರೇಲ್ ನ ಭದ್ರತಾ ಸಚಿವ ಬೆನ್ ಗ್ವಿರ್

Photo Credit : Reuters
ಟೆಲ್ ಅವೀವ್: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಬೇಕು ಎಂದು ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವ ಬೆನ್ ಗ್ವಿರ್ ಹೇಳಿದ್ದಾರೆ. ಗಾಝಾದಲ್ಲಿ ಪ್ರತಿರಾತ್ರಿ 30ರಿಂದ 40 ಮಂದಿಯನ್ನು ಹತ್ಯೆ ಮಾಡಬೇಕು ಎಂದು ಅವರು ಕರೆ ನೀಡಿದ್ದಾರೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲ್ ಸರಕಾರದ ಪ್ರಮುಖ ಮಿತ್ರಪಕ್ಷದ ನಾಯಕರಾಗಿರುವ ಬೆನ್ ಗ್ವಿರ್ ಅವರ ಈ ಹೇಳಿಕೆ ರವಿವಾರ ಬಹಿರಂಗವಾಗಿದೆ. ಫೆಲೆಸ್ತೀನ್ ಸುದ್ದಿ ಸಂಸ್ಥೆಗಳು ಕೂಡ ಈ ಹೇಳಿಕೆಯನ್ನು ಹಂಚಿಕೊಂಡಿವೆ.
ಮಾಜಿ ಗಾಝಾ ಒತ್ತೆಯಾಳು ರಾಮ್ ಬ್ರಸ್ಲವ್ಸ್ಕಿ ನಡೆಸಿಕೊಡುವ ಪಾಡ್ಕಾಸ್ಟ್ನಲ್ಲಿ ಬೆನ್ ಗ್ವಿರ್ ಭಾಗವಹಿಸಿದ್ದರು. 2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ಬಳಿಕ ಇಸ್ರೇಲ್ ಕೈಗೊಂಡ ಪ್ರತಿಕ್ರಿಯೆ ಕುರಿತು ಇಬ್ಬರೂ ಚರ್ಚಿಸಿದರು. ಇತ್ತೀಚೆಗೆ ಗಾಝಾ ಮೇಲಿನ ದಾಳಿಯನ್ನು ಇಸ್ರೇಲ್ ಕಡಿಮೆ ಮಾಡಿರುವ ಬಗ್ಗೆಯೂ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬೆನ್ ಗ್ವಿರ್, ‘ಪ್ರಧಾನಿ ನೆತನ್ಯಾಹು ಅವರೊಂದಿಗೆ ನನಗೆ ಭಿನ್ನಾಭಿಪ್ರಾಯವಿದೆ ಎಂಬುದು ರಹಸ್ಯವಲ್ಲ. ಗಾಝಾದಲ್ಲಿ ಗುರಿಯಾಗಿಸಿಕೊಂಡ ದಾಳಿ ನಡೆಸಿ, ಪ್ರತಿರಾತ್ರಿ 30ರಿಂದ 40 ಮಂದಿಯನ್ನು ಹತ್ಯೆ ಮಾಡಬೇಕು ಎಂಬುದು ನನ್ನ ಅಭಿಪ್ರಾಯ’ ಎಂದರು.
‘ತಕ್ಷಣದ ಬೆದರಿಕೆ ಒಡ್ಡುವವರ ವಿರುದ್ಧ ಮಾತ್ರ ದಾಳಿ ನಡೆಸಬಾರದು. ಬದಲಿಗೆ, ಜೀವಿಸಲು ಅರ್ಹರಲ್ಲ ಎಂದು ನಾನು ಭಾವಿಸುವವರ ವಿರುದ್ಧವೂ ದಾಳಿ ನಡೆಸಬೇಕು. ಅವರು ಬದುಕಬಾರದು. ಅವರು ಮನುಷ್ಯರೂ ಅಲ್ಲ’ ಎಂದು ಅವರು ಹೇಳಿದರು.
ಬೆನ್ ಗ್ವಿರ್ ಮತ್ತು ಇತರ ಇಸ್ರೇಲ್ ಅಧಿಕಾರಿಗಳು ಈ ಹಿಂದೆ ನೀಡಿದ್ದ ಇದೇ ರೀತಿಯ ಹೇಳಿಕೆಗಳು ಕೂಡ ವ್ಯಾಪಕ ಟೀಕೆಗೆ ಗುರಿಯಾಗಿದ್ದವು. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯ ಹಿಂದೆ ಜನಾಂಗೀಯ ಹತ್ಯೆಯ ಉದ್ದೇಶವಿದೆ ಎಂಬ ಆರೋಪಕ್ಕೆ ಸಾಕ್ಷಿಯಾಗಿ ಇಂತಹ ಹೇಳಿಕೆಗಳನ್ನು ಕೆಲವರು ವಿಶ್ವಸಂಸ್ಥೆಯ ವಿಶ್ವ ನ್ಯಾಯಾಲಯದ ಮುಂದೆಯೂ ಮಂಡಿಸಿದ್ದರು.
ಗಾಝಾದಲ್ಲಿ ಜನಾಂಗೀಯ ಹತ್ಯೆ ನಡೆಸಲಾಗುತ್ತಿದೆ ಎಂಬ ಆರೋಪವನ್ನು ಇಸ್ರೇಲ್ ತಳ್ಳಿಹಾಕಿದೆ.






