ಗಾಝಾ ನಗರ ಸ್ವಾಧೀನಕ್ಕೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಯೋಜನೆ: ಅನುಮೋದನೆ ನೀಡಿದ ಇಸ್ರೇಲ್ ಭದ್ರತಾ ಸಂಪುಟ

PC | Reuters
ಜೆರುಸಲೇಂ, ಆ.8: ಗಾಝಾ ನಗರವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರಸ್ತಾವನೆಗೆ ಇಸ್ರೇಲ್ನ ಭದ್ರತಾ ಸಚಿವ ಸಂಪುಟ ಅನುಮೋದನೆ ನೀಡಿರುವುದಾಗಿ ಪ್ರಧಾನಿಯ ಕಚೇರಿಯನ್ನು ಉಲ್ಲೇಖಿಸಿ ಸಿಎನ್ಎನ್ ಶುಕ್ರವಾರ ವರದಿ ಮಾಡಿದೆ.
ಯುದ್ಧವಲಯಗಳ ಹೊರಗೆ ನಾಗರಿಕ ಜನಸಂಖ್ಯೆಗೆ ಮಾನವೀಯ ನೆರವು ಒದಗಿಸುವುದನ್ನು ಖಾತರಿಪಡಿಸಿಕೊಂಡು ಗಾಝಾ ನಗರವನ್ನು ಸ್ವಾಧೀನಪಡಿಸಿಕೊಳ್ಳಲು ಐಡಿಎಫ್(ಇಸ್ರೇಲ್ ರಕ್ಷಣಾ ಪಡೆಗಳು) ತಯಾರಿ ನಡೆಸುತ್ತವೆ ಎಂದು ಹೇಳಿಕೆ ತಿಳಿಸಿದೆ.
ಇಸ್ರೇಲ್ ಮೂಲಗಳ ಪ್ರಕಾರ ಗಾಝಾ ನಗರದಿಂದ ಸ್ಥಳಾಂತರಗೊಳ್ಳಲು ಅಕ್ಟೋಬರ್ 7ರ ಗಡುವು ವಿಧಿಸಲಾಗಿದೆ. ಗಾಝಾ ನಗರದಲ್ಲಿ ನೆರವು ವಿತರಣೆ ಸ್ಥಗಿತಗೊಳಿಸುವ ಮೂಲಕ ಸ್ಥಳಾಂತರಗೊಳ್ಳಲು ಫೆಲೆಸ್ತೀನೀಯರನ್ನು ಬಲವಂತಗೊಳಿಸಬೇಕು ಎಂದು ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ. ಗಾಝಾ ನಗರದ ನಿವಾಸಿಗಳನ್ನು ಮಧ್ಯ ಗಾಝಾ ಅಥವಾ ಇತರ ಪ್ರದೇಶಗಳ ಶಿಬಿರಗಳಿಗೆ ಅಕ್ಟೋಬರ್ 7ರ ಮೊದಲು ಬಲವಂತದಿಂದ ಸ್ಥಳಾಂತರಿಸುವುದು. ಗಾಝಾ ನಗರದಲ್ಲಿ ಉಳಿಯುವ ಹಮಾಸ್ ಸದಸ್ಯರಿಗೆ ದಿಗ್ಬಂಧನ ವಿಧಿಸುವುದು ಮತ್ತು ಇದೇ ಸಮಯದಲ್ಲಿ ಗಾಝಾ ನಗರದಲ್ಲಿ ಭೂ ಕಾರ್ಯಾಚರಣೆಗೆ ಚಾಲನೆ ನೀಡುವುದು ಯೋಜನೆಯ ಸಾರಾಂಶವಾಗಿದೆ.
ಇಸ್ರೇಲಿನ ಯೋಜನೆಗೆ ಜಾಗತಿಕ ನಾಯಕರಿಂದ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿದ್ದು ಇದು ಗಾಝಾದಲ್ಲಿ ಈಗಾಗಲೇ ತೀವ್ರಗೊಂಡಿರುವ ಮಾನವೀಯ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಿಸಲಿದೆ ಎಂದು ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಭದ್ರತಾ ಸಂಪುಟದ ನಿರ್ಣಯವನ್ನು ಇದೀಗ ಸಚಿವ ಸಂಪುಟದ ಎದುರು ಮಂಡಿಸಲಾಗುವುದು ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಗಾಝಾ ನಗರವನ್ನು ಸ್ವಾಧೀನಪಡಿಸಿಕೊಳ್ಳುವುದು ಫೆಲೆಸ್ತೀನಿಯನ್ ಪ್ರದೇಶದಲ್ಲಿನ ಯುದ್ಧದಲ್ಲಿ ಪ್ರಮುಖ ಉಲ್ಬಣವಾಗಿದೆ ಮತ್ತು ಈಗಾಗಲೇ ಹಸಿವು ಮತ್ತು ಹತಾಶೆಯಿಂದ ಕಂಗೆಟ್ಟಿರುವ ಸಾವಿರಾರು ನಿವಾಸಿಗಳ ಬಲವಂತದ ಸ್ಥಳಾಂತರಕ್ಕೆ ಕಾರಣವಾಗಲಿದೆ.
►ಯೋಜನೆ ತಕ್ಷಣ ಸ್ಥಗಿತಕ್ಕೆ ವಿಶ್ವಸಂಸ್ಥೆ ಆಗ್ರಹ
ಗಾಝಾ ನಗರವನ್ನು ಸಂಪೂರ್ಣ ವಶಕ್ಕೆ ಪಡೆಯುವ ಇಸ್ರೇಲ್ ಸರಕಾರದ ಯೋಜನೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಶುಕ್ರವಾರ ಆಗ್ರಹಿಸಿದ್ದಾರೆ.
ಇಸ್ರೇಲ್ ತನ್ನ ಆಕ್ರಮಣವನ್ನು ಆದಷ್ಟು ಬೇಗ ಕೊನೆಗೊಳಿಸಬೇಕು ಮತ್ತು ಎರಡು ರಾಷ್ಟ್ರಗಳ ಪರಿಹಾರ ಸೂತ್ರವನ್ನು ಪಾಲಿಸಬೇಕು ಮತ್ತು ಸ್ವಯಂ ನಿರ್ಣಯದ ಫೆಲೆಸ್ತೀನೀಯರ ಹಕ್ಕನ್ನು ಮಾನ್ಯ ಮಾಡಬೇಕು ಎಂಬ ಅಂತರಾಷ್ಟ್ರೀಯ ನ್ಯಾಯಾಲಯದ ತೀರ್ಪಿಗೆ ಈ ಯೋಜನೆ ವಿರುದ್ಧವಾಗಿದೆ ಎಂದವರು ಹೇಳಿದ್ದಾರೆ.
► ಅಂತರಾಷ್ಟ್ರೀಯ ಸಮುದಾಯದ ಖಂಡನೆ
ಡ೧ಗಾಝಾದಲ್ಲಿನ ಕಾರ್ಯಾಚರಣೆ ತೀವ್ರಗೊಳಿಸುವ ಇಸ್ರೇಲ್ನ ಯೋಜನೆ `ತಪ್ಪು' ಎಂದು ಬ್ರಿಟನ್ 0
ಪ್ರಧಾನಿ ಕೀರ್ ಸ್ಟಾರ್ಮರ್ ಪ್ರತಿಕ್ರಿಯಿಸಿದ್ದಾರೆ. ಈ ಕ್ರಮವು ಗಾಝಾ ಬಿಕ್ಕಟ್ಟನ್ನು ಕೊನೆಗೊಳಿಸುವಲ್ಲಿ ಅಥವಾ ಒತ್ತೆಯಾಳುಗಳ ಬಿಡುಗಡೆಗೆ ಯಾವ ರೀತಿಯಲ್ಲಿಯೂ ನೆರವಾಗದು. ಇದು ಮತ್ತಷ್ಟು ರಕ್ತಪಾತಕ್ಕೆ ಮಾತ್ರ ಕಾರಣವಾಗಲಿದೆ' ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೋರ್ಡಾನ್, ಟರ್ಕಿ, ಆಸ್ಟ್ರೇಲಿಯಾ, ಚೀನಾ, ಬೆಲ್ಜಿಯಂ, ಜರ್ಮನಿ, ಯುರೋಪಿಯನ್ ಯೂನಿಯನ್ ಸೇರಿದಂತೆ ಹಲವು ದೇಶಗಳು ಇಸ್ರೇಲ್ ತನ್ನ ಯೋಜನೆಯ ಬಗ್ಗೆ ಮರು ಪರಿಶೀಲಿಸುವಂತೆ ಆಗ್ರಹಿಸಿವೆ.







