Isreal ಭದ್ರತೆಯನ್ನು ನೆತನ್ಯಾಹು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ: ಐಸನ್ಕೋಟ್

ಗಾಡಿ ಐಸನ್ಕೋಟ್ | Photo Credit : AP
ಟೆಲ್ ಅವೀವ್, ನ. 11: ಉಸ್ತುವಾರಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಧಿಕಾರದಲ್ಲಿ ಮುಂದುವರಿಯಲು ಅನರ್ಹರು. ಅವರ ನಿರಂತರ ನಾಯಕತ್ವವು ಇಸ್ರೇಲ್ ನ ಭದ್ರತೆಗೆ ಅಪಾಯ ತಂದೊಡ್ಡಲಿದೆ ಎಂದು ಇಸ್ರೇಲ್ ನಲ್ಲಿ ಮುಂದಿನ ಸರಕಾರ ರಚಿಸಲು ಪ್ರಯತ್ನಿಸುತ್ತಿರುವ ಗಾಡಿ ಐಸನ್ಕೋಟ್ ಎಚ್ಚರಿಸಿದ್ದಾರೆ. ತಕ್ಷಣವೇ ರಾಷ್ಟ್ರೀಯ ತುರ್ತು ಸರಕಾರ ರಚಿಸುವಂತೆ ಸಂಸದರಿಗೆ ಕರೆ ನೀಡಿದ್ದಾರೆ.
ಹೊಸ ಸಂಸತ್ತಿನ ಉದ್ಘಾಟನಾ ಅಧಿವೇಶನದಲ್ಲಿ ಇರಾನ್ನಿಂದ ಹೆಚ್ಚುತ್ತಿರುವ ಬೆದರಿಕೆಯನ್ನು ಉಲ್ಲೇಖಿಸಿ, ರಾಷ್ಟ್ರೀಯ ಏಕತೆಯ ಸರಕಾರ ರಚಿಸುವಂತೆ ನೆತನ್ಯಾಹು ಕರೆ ನೀಡಿದ ಬಳಿಕ ಪ್ರತಿಕ್ರಿಯಿಸಿದ ಐಸನ್ಕೋಟ್, ‘ಉಸ್ತುವಾರಿ ಪ್ರಧಾನಿಯವರು ಪ್ರಮುಖ ಸರಕಾರಿ ಕಾರ್ಯಕ್ರಮವನ್ನು ದೇಶದಲ್ಲಿ ವಿಭಜನೆ ಮೂಡಿಸಲು ಬಳಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.
‘ನಿರ್ಗಮಿತ ಪ್ರಧಾನಿಯವರ ಭ್ರಮೆ, ವಿಭಜನೆ, ದ್ವೇಷಪೂರಿತ ಮತ್ತು ನಾಚಿಕೆಗೇಡಿನ ಭಾಷಣವನ್ನು ನಾನು ಆಲಿಸಿದೆ. ಅವರು ಇನ್ನು ಒಂದು ನಿಮಿಷವೂ ಅಧಿಕಾರದಲ್ಲಿ ಮುಂದುವರಿಯಲು ಅರ್ಹರಲ್ಲ ಎಂಬುದು ನನಗೆ ಈಗ ಇನ್ನಷ್ಟು ದೃಢಪಟ್ಟಿದೆ’ ಎಂದು ಐಸನ್ಕೋಟ್ ಹೇಳಿದರು.




