ಗಾಝಾ ಯುದ್ಧ ಕೊನೆಗೊಳಿಸಲು ನೆತನ್ಯಾಹು `ಅಡಚಣೆ': ಒತ್ತೆಯಾಳುಗಳ ವೇದಿಕೆ ಆಕ್ರೋಶ

ಬೆಂಜಮಿನ್ ನೆತನ್ಯಾಹು |PC : PTI
ಜೆರುಸಲೇಂ, ಸೆ.14: ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಮುಖ ಅಡಚಣೆಯಾಗಿದ್ದಾರೆ ಎಂದು ಗಾಝಾದಲ್ಲಿ ಬಂಧಿಯಾಗಿರುವ ಒತ್ತೆಯಾಳುಗಳ ಬಿಡುಗಡೆಗಾಗಿ ಅಭಿಯಾನ ನಡೆಸುತ್ತಿರುವ ಇಸ್ರೇಲ್ನ `ಒತ್ತೆಯಾಳುಗಳ ಹಾಗೂ ಕಾಣೆಯಾದವರ ಕುಟುಂಬಗಳ ವೇದಿಕೆ' ರವಿವಾರ ಆಕ್ರೋಶ ವ್ಯಕ್ತಪಡಿಸಿದೆ.
ಪ್ರತೀ ಬಾರಿ ಒಪ್ಪಂದ ಸನ್ನಿಹಿತವಾಗುವಾಗ ನೆತನ್ಯಾಹು ಅದನ್ನು ಹಾಳುಗೆಡವುತ್ತಾರೆ ಎಂದು ಖತರ್ ನಲ್ಲಿ ಹಮಾಸ್ ಸದಸ್ಯರ ಮೇಲೆ ಇಸ್ರೇಲ್ನ ದಾಳಿಯನ್ನು ಉಲ್ಲೇಖಿಸಿ ವೇದಿಕೆ ಆರೋಪಿಸಿದೆ.
ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ನೆತನ್ಯಾಹು `ಖತರ್ನಲ್ಲಿ ಐಷಾರಾಮಿ ಹೋಟೆಲ್ ಗಳಲ್ಲಿ ನೆಲೆಸಿರುವ ಹಮಾಸ್ ನಾಯಕರು ಗಾಝಾದ ಜನತೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯುದ್ಧವನ್ನು ದೀರ್ಘಾವಧಿಯವರೆಗೆ ಎಳೆಯಲು ಅವರು ಪ್ರಯತ್ನಿಸುತ್ತಿದ್ದಾರೆ' ಎಂದು ಆರೋಪಿಸಿದ್ದರು.
ಈ ಹೇಳಿಕೆಯನ್ನು ತಿರಸ್ಕರಿಸಿರುವ ವೇದಿಕೆ `ಒತ್ತೆಯಾಳುಗಳನ್ನು ಸ್ವದೇಶಕ್ಕೆ ಕರೆತರುವಲ್ಲಿನ ವೈಫಲ್ಯವನ್ನು ಮರೆಮಾಚಲು ನೆತನ್ಯಾಹು ಕಾರಣ ಹುಡುಕುತ್ತಿದ್ದಾರೆ. ಸಮಯವನ್ನು ಖರೀದಿಸುವ ಮೂಲಕ ಅಧಿಕಾರಕ್ಕೆ ಸಾಧ್ಯವಾದಷ್ಟು ಸಮಯ ಅಂಟಿಕೊಳ್ಳುವುದು ಅವರ ಉದ್ದೇಶವಾಗಿದೆ. ಸಮಯ ಕಳೆದಂತೆಲ್ಲಾ ಗಾಝಾದಲ್ಲಿರುವ ಒತ್ತೆಯಾಳುಗಳ ಜೀವಕ್ಕೆ ಅಪಾಯ ಹೆಚ್ಚುತ್ತಾ ಹೋಗುತ್ತದೆ ಎಂಬುದನ್ನು ನೆತನ್ಯಾಹು ತಿಳಿದುಕೊಳ್ಳಬೇಕು' ಎಂದು ಆಗ್ರಹಿಸಿದೆ.
ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದಕ್ಕೆ ಸಮ್ಮತಿಸುವಂತೆ ಸರಕಾರವನ್ನು ಆಗ್ರಹಿಸಿ ಶನಿವಾರ ಸಂಜೆ ಟೆಲ್ಅವೀವ್ ನಲ್ಲಿ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.







