ಮುನೀರ್ ಹತ್ಯೆಗೆ ಮೊಸಾದ್ ಸಂಚು ರೂಪಿಸಿತ್ತು: ಬ್ರೆಝಿಲ್ ಪತ್ರಕರ್ತನಿಂದ ಆರೋಪ

ಅಸಿಮ್ ಮುನೀರ್ | Photo Credit : AP
ಜಿನೀವಾ/ಇಸ್ಲಾಮಾಬಾದ್: ಇರಾನ್–ಅಮೆರಿಕ ಶಾಂತಿ ಮಾತುಕತೆಗಳ ಸಂದರ್ಭದಲ್ಲಿ ಸ್ವಿಟ್ಜರ್ಲೆಂಡ್ ನ ಜಿನೀವಾದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಹಾಗೂ ಪಾಕಿಸ್ತಾನದ ನಿಯೋಗವನ್ನು ಹತ್ಯೆ ಮಾಡಲು ಇಸ್ರೇಲ್ನ ಗುಪ್ತಚರ ಸಂಸ್ಥೆ ಮೊಸಾದ್ ಸಂಚು ರೂಪಿಸಿತ್ತು ಎಂದು ಬ್ರೆಝಿಲ್ನ ತನಿಖಾ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಪೆಪೆ ಎಸ್ಕೋಬಾರ್ ಆರೋಪಿಸಿದ್ದಾರೆ.
ಈ ಸಂಚಿನ ಬಗ್ಗೆ ತಿಳಿದ ಬಳಿಕ ಪಾಕಿಸ್ತಾನವು ರಾಜತಾಂತ್ರಿಕ ಮಧ್ಯವರ್ತಿಗಳ ಮೂಲಕ "ಇಸ್ರೇಲ್ ಅನ್ನು ನಕ್ಷೆಯಿಂದ ಅಳಿಸಿಹಾಕುತ್ತೇವೆ" ಎಂಬ ಎಚ್ಚರಿಕೆಯನ್ನು ರವಾನಿಸಿತ್ತು ಎಂದೂ ಅವರು ಹೇಳಿದ್ದಾರೆ. ಆದರೆ, ಈ ಆರೋಪಗಳನ್ನು ಪಾಕಿಸ್ತಾನದ ಪತ್ರಕರ್ತರು ಹಾಗೂ ಭದ್ರತಾ ಮೂಲಗಳು ತಳ್ಳಿಹಾಕಿದ್ದು, ಯಾವುದೇ ಅಧಿಕೃತ ದೃಢೀಕರಣ ದೊರೆತಿಲ್ಲ.
ಪಾಕಿಸ್ತಾನವು ಅಮೆರಿಕ ಮತ್ತು ಇರಾನ್ ನಡುವಿನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಆರಂಭಿಕ ಒಪ್ಪಂದಕ್ಕೆ 'ಇಸ್ಲಾಮಾಬಾದ್ ಮೆಮೊರಾಂಡಮ್ ಆಫ್ ಅಂಡರ್ಸ್ಟ್ಯಾಂಡಿಂಗ್' (MOU) ಎಂದು ಹೆಸರಿಸಲಾಗಿದೆ. ಈ ಒಪ್ಪಂದಕ್ಕೆ ಸಂಬಂಧಿಸಿದ ಮುಂದಿನ ಹಂತದ ಮಾತುಕತೆಗಳು ಜಿನೀವಾದಲ್ಲಿ ನಡೆದಿದ್ದು, ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
ಮಾರಿಯೋ ನವ್ಫಲ್ ನಡೆಸಿದ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಬ್ರೆಝಿಲ್ ಪತ್ರಕರ್ತ ಪೆಪೆ ಎಸ್ಕೋಬಾರ್, ಜಿನೀವಾದಲ್ಲಿ ನಡೆದ ಇರಾನ್–ಅಮೆರಿಕ ಶಾಂತಿ ಮಾತುಕತೆಗಳ ವೇಳೆ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಹಾಗೂ ಪಾಕಿಸ್ತಾನದ ನಿಯೋಗವನ್ನು ಹತ್ಯೆ ಮಾಡಲು ಮೊಸಾದ್ ಸಂಚು ರೂಪಿಸಿತ್ತು ಎಂದು ಆರೋಪಿಸಿದರು.
ಸ್ವಿಟ್ಜರ್ಲೆಂ ಡ್ನಲ್ಲಿ ನಡೆದ ಮಾತುಕತೆಗಳ ವೇಳೆ ಮುನೀರ್ ಮತ್ತು ನಿಯೋಗದ ಇತರ ಸದಸ್ಯರನ್ನು ಗುರಿಯಾಗಿಸಿ ಮೊಸಾದ್ ಹತ್ಯೆ ಸಂಚು ರೂಪಿಸುತ್ತಿದೆ ಎಂಬುದನ್ನು ಸೂಚಿಸುವ "ಅತ್ಯಂತ ವಿಶ್ವಾಸಾರ್ಹ ಮಾಹಿತಿ"ಯನ್ನು ಪಾಕಿಸ್ತಾನದ ಸೇನಾ ಗುಪ್ತಚರ ಸಂಸ್ಥೆ ಪತ್ತೆಹಚ್ಚಿದೆ ಎಂದು ಎಸ್ಕೋಬಾರ್ ಹೇಳಿದ್ದಾರೆ.
ಇರಾನ್–ಅಮೆರಿಕ ಶಾಂತಿ ಒಪ್ಪಂದದ ಬಗ್ಗೆ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಇಸ್ರೇಲ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ. ಲೆಬನಾನ್ನಲ್ಲಿ ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ಈ ಒಪ್ಪಂದಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇರಾನ್ ಬೆಂಬಲಿತ ಹೆಜ್ಬೊಲ್ಲಾ ಇನ್ನೂ ಬೆದರಿಕೆಯಾಗಿರುವುದರಿಂದ ಲೆಬನಾನ್ ನಲ್ಲಿ ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಹೇಳಿದೆ.
ಪಾಡ್ಕಾಸ್ಟ್ ವೇಳೆ ಮಾರಿಯೋ ನವ್ಫಲ್ ಅವರು ರಾಜತಾಂತ್ರಿಕ ಮಾತುಕತೆಗಳ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಬಗ್ಗೆ ಪ್ರಶ್ನಿಸಿದಾಗ, "ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆದೇಶದ ಮೇರೆಗೆ ಮೊಸಾದ್, ಅಸಿಮ್ ಮುನೀರ್ ಹಾಗೂ ಬಹುಶಃ ಪಾಕಿಸ್ತಾನದ ಉಳಿದ ನಿಯೋಗದ ವಿರುದ್ಧ ಸ್ವಿಟ್ಜರ್ಲೆಂಡ್ನಲ್ಲಿ ಹತ್ಯೆ ಯತ್ನ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂಬ ಅತ್ಯಂತ ವಿಶ್ವಾಸಾರ್ಹ ಮಾಹಿತಿಯನ್ನು ಪಾಕಿಸ್ತಾನಿ ಸೇನೆ ಪಡೆದಿದೆ" ಎಂದು ಎಸ್ಕೋಬಾರ್ ಹೇಳಿದ್ದಾರೆ.
'ಇಸ್ರೇಲ್ ಅನ್ನು ನಕ್ಷೆಯಿಂದ ಅಳಿಸಿಹಾಕುತ್ತೇವೆ'
ಮೊಸಾದ್ ಸಂಚಿನ ಮಾಹಿತಿ ದೊರೆತ ಬಳಿಕ ಪಾಕಿಸ್ತಾನವು ರಾಜತಾಂತ್ರಿಕ ಮಧ್ಯವರ್ತಿಗಳ ಮೂಲಕ ನೇರ ಸಂದೇಶ ಕಳುಹಿಸಿದೆ ಎಂದು ಎಸ್ಕೋಬಾರ್ ಹೇಳಿದ್ದಾರೆ.
"ಪಾಕಿಸ್ತಾನವು ಮಧ್ಯವರ್ತಿಗಳ ಮೂಲಕ ನೇರ ಸಂದೇಶ ಕಳುಹಿಸಿತು. ಈ ಸಂದರ್ಭದಲ್ಲಿ ಒಮಾನ್ ಮೂಲಕ 'ನೀವು ನಮ್ಮ ನಿಯೋಗವನ್ನು ಮುಟ್ಟಿದರೆ, ನಾವು ನಿಮ್ಮನ್ನು ನಕ್ಷೆಯಿಂದ ಅಳಿಸಿಹಾಕುತ್ತೇವೆ' ಎಂದು ಇಸ್ರೇಲ್ ಗೆ ತಿಳಿಸಲಾಗಿದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಮೂಲಗಳು ತಿಳಿಸಿರುವ ಮಾಹಿತಿ ಇದೇ" ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಏಕೈಕ ಇಸ್ಲಾಮಿಕ್ ರಾಷ್ಟ್ರವಾಗಿದೆ. ಇಸ್ರೇಲ್ ಕೂಡ ಪರಮಾಣು ಶಕ್ತಿಯ ರಾಷ್ಟ್ರವೆಂದು ಪರಿಗಣಿಸಲಾಗಿದೆ.
ಆದರೆ, ಎಸ್ಕೋಬಾರ್ ಅವರ ಹೇಳಿಕೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ. ಪಾಕಿಸ್ತಾನ ಅಥವಾ ಇಸ್ರೇಲ್ ಸರ್ಕಾರಗಳು ಈ ಆರೋಪಗಳನ್ನು ದೃಢೀಕರಿಸಿಲ್ಲ. ಆರೋಪಗಳಿಗೆ ಬೆಂಬಲವಾಗಿ ಯಾವುದೇ ಸಾಕ್ಷ್ಯವನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ.
ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಉದ್ವಿಗ್ನತೆ ತಗ್ಗಿಸುವ ಉದ್ದೇಶದಿಂದ ನಡೆದ ರಾಜತಾಂತ್ರಿಕ ಮಾತುಕತೆಗಳಿಗೆ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಪಾಕಿಸ್ತಾನಿ ನಿಯೋಗ ಭಾಗವಹಿಸಿದ್ದ ಕೆಲವೇ ದಿನಗಳ ಬಳಿಕ ಈ ಆರೋಪಗಳು ಕೇಳಿಬಂದಿವೆ. ಅಸಿಮ್ ಮುನೀರ್ ಕೂಡ ಆ ನಿಯೋಗದ ಸದಸ್ಯರಾಗಿದ್ದರು.
ಪಾಕ್ ಪತ್ರಕರ್ತರಿಂದ ತಿರಸ್ಕಾರ
ಎಸ್ಕೋಬಾರ್ ಅವರ ಹೇಳಿಕೆಯನ್ನು ಪಾಕಿಸ್ತಾನದ ಪತ್ರಕರ್ತರು ಮತ್ತು ವಿಶ್ಲೇಷಕರು ತೀವ್ರವಾಗಿ ತಿರಸ್ಕರಿಸಿದ್ದಾರೆ.
ಪಾಕಿಸ್ತಾನದ ಪತ್ರಕರ್ತ ಕಮ್ರಾನ್ ಖಾನ್, ಎಕ್ಸ್ನಲ್ಲಿ, ಪಾಕಿಸ್ತಾನದ ಉನ್ನತ ಮಟ್ಟದ ಭದ್ರತಾ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ, ಎಸ್ಕೋಬಾರ್ ಅವರ ಆರೋಪವನ್ನು "ಸಂಪೂರ್ಣ ಆಧಾರರಹಿತ" ಹಾಗೂ "ಅಸಂಬದ್ಧ" ಎಂದು ತಳ್ಳಿಹಾಕಿದ್ದಾರೆ. ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ಸ್ವಿಟ್ಜರ್ಲೆಂಡ್ ಭೇಟಿ ಯಾವುದೇ ಭದ್ರತಾ ಸಮಸ್ಯೆಯಿಲ್ಲದೆ ಸುಗಮವಾಗಿ ನಡೆದಿದ್ದು, ಸ್ವಿಸ್ ಅಥವಾ ಅಮೆರಿಕದ ಭದ್ರತಾ ತಂಡಗಳು ಯಾವುದೇ ಎಚ್ಚರಿಕೆ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಉನ್ನತ ಮಟ್ಟದ ಭದ್ರತಾ ಅಧಿಕಾರಿಯೊಬ್ಬರ ಪ್ರಕಾರ, ಹತ್ಯೆ ಸಂಚಿನ ಆರೋಪವು ಸಂಪೂರ್ಣ ಆಧಾರರಹಿತವಾಗಿದ್ದು, ವಾಸ್ತವಾಂಶಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಕಮ್ರಾನ್ ಖಾನ್ ಹೇಳಿದ್ದಾರೆ.
ಪಾಕಿಸ್ತಾನದ ಡಿಜಿಟಲ್ ಸುದ್ದಿ ವೇದಿಕೆ ದಿ ಕರೆಂಟ್ ವರದಿ ಪ್ರಕಾರ, ಹಲವು ಪತ್ರಕರ್ತರು ಸಹ ಎಸ್ಕೋಬಾರ್ ಅವರ ಆರೋಪಗಳನ್ನು ತಳ್ಳಿಹಾಕಿದ್ದು, ಅವುಗಳಿಗೆ ಯಾವುದೇ ವಾಸ್ತವಿಕ ಆಧಾರ ಅಥವಾ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.
ಹಿರಿಯ ಪತ್ರಕರ್ತ ಸೈಯದ್ ತಲಾತ್ ಹುಸೇನ್ ಕೂಡ ಎಕ್ಸ್ನಲ್ಲಿ ಪ್ರತಿಕ್ರಿಯಿಸಿ, "ಇದು ಸಂಪೂರ್ಣ ಅಸಂಬದ್ಧ. ಇದರಲ್ಲಿ ಸ್ವಲ್ಪವೂ ಸತ್ಯವಿಲ್ಲ. ಅಂತಹ ಯಾವುದೇ ಘಟನೆ ನಡೆದಿಲ್ಲ" ಎಂದು ಹೇಳಿದ್ದಾರೆ.
ಪಾಕಿಸ್ತಾನದ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಈ ಆರೋಪವನ್ನು "ವಿಕೃತ ಪ್ರಚಾರ" ಎಂದು ಬಣ್ಣಿಸಿದ್ದಾರೆ ಎಂದು ಹುಸೇನ್ ತಿಳಿಸಿದ್ದಾರೆ.






