ಇರಾನಿನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಾಮಿನೈರ ಹತ್ಯೆಯ ಸಾಧ್ಯತೆಯನ್ನು ತಳ್ಳಿಹಾಕಿಲ್ಲ: ಇಸ್ರೇಲ್ ಪ್ರಧಾನಿ ನೆತನ್ಯಾಹು
"ಇರಾನ್ ನ ಉನ್ನತ ಪರಮಾಣು ವಿಜ್ಞಾನಿಗಳೇ ನಮ್ಮ ಗುರಿ"

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಟೆಲ್ ಅವೀವ್: ಇರಾನ್ ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಾಮಿನೈ ಅವರ ಹತ್ಯೆಯ ಸಾಧ್ಯತೆಯನ್ನು ತಳ್ಳಿಹಾಕುತ್ತಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸಂದರ್ಶನದಲ್ಲಿ ಎಬಿಸಿ ನ್ಯೂಸ್ ಗೆ ಹೇಳಿದ್ದಾರೆ.
ಇಸ್ರೇಲ್ ಕಂಡ ಅತಿದೊಡ್ಡ ಮತ್ತು ಅತ್ಯಂತ ತೀವ್ರವಾದ ಕ್ಷಿಪಣಿ ದಾಳಿ ಯನ್ನು ಇರಾನ್ ಯೋಜಿಸುತ್ತಿದೆ ಎಂದು ಹೇಳಿದ ಕೆಲವೇ ಗಂಟೆಗಳ ನಂತರ ಇಸ್ರೇಲ್ ಪ್ರಧಾನಿಯವರ ಹೇಳಿಕೆ ಬಂದಿದೆ. ಖಾಮಿನೈ ಅವರನ್ನು ಗುರಿಯಾಗಿಸಿಕೊಳ್ಳುವುದು ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಹೋರಾಟವನ್ನು ಹೆಚ್ಚಿಸುವುದಿಲ್ಲ. ಅದನ್ನು ಕೊನೆಗೊಳಿಸುತ್ತದೆ ಎಂದು ನೆತನ್ಯಾಹು ಪ್ರತಿಕ್ರಿಯಿಸಿದ್ದಾರೆ.
"ಇರಾನ್ ಬಯಸುತ್ತಿರುವುದು ಶಾಶ್ವತ ಯುದ್ಧ. ಅವರು ನಮ್ಮನ್ನು ಪರಮಾಣು ಯುದ್ಧದ ಅಂಚಿಗೆ ತರುತ್ತಿದ್ದಾರೆ. ವಾಸ್ತವವಾಗಿ, ಇಸ್ರೇಲ್ ಇದನ್ನು ತಡೆಯಲು ಪ್ರಯತ್ನಿಸುತ್ತಿದೆ. ನಾವು ದುಷ್ಟ ಶಕ್ತಿಗಳನ್ನು ಎದುರಿಸುವ ಮೂಲಕ ಮಾತ್ರ ಈ ಆಕ್ರಮಣವನ್ನು ಕೊನೆಗೊಳಿಸುತ್ತೇವೆ", ಎಂದು ಅವರು ಸುದ್ದಿವಾಹಿನಿಗೆ ತಿಳಿಸಿದರು.
ಇರಾನಿನ ಸರ್ವೋಚ್ಚ ನಾಯಕರನ್ನು ಇಸ್ರೇಲ್ ಗುರಿಯಾಗಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನೆತನ್ಯಾಹು, ತಮ್ಮ ದೇಶವು ಮಾಡಬೇಕಾದ್ದನ್ನು ಮಾಡುತ್ತಿದೆ. ಅದೇನೆಂದು ನಾನು ವಿವರಿಸಲು ಹೋಗುವುದಿಲ್ಲ. ಆದರೆ ನಾವು ಇರಾನ್ ನ ಉನ್ನತ ಪರಮಾಣು ವಿಜ್ಞಾನಿಗಳನ್ನು ಗುರಿಯಾಗಿಸಿಕೊಂಡಿದ್ದೇವೆ. ಇದು ಮೂಲತಃ ಹಿಟ್ಲರ್ ನ ಪರಮಾಣು ತಂಡ ಎಂದು ನೆತನ್ಯಾಹು ಬಹಿರಂಗ ಬೆದರಿಕೆ ಹಾಕಿದ್ದಾರೆ.







