ಗಾಝಾದಿಂದ ಫೆಲೆಸ್ತೀನೀಯರ ಸ್ಥಳಾಂತರದ ಬಗ್ಗೆ ನೆತನ್ಯಾಹು, ಟ್ರಂಪ್ ಚರ್ಚೆ: ವರದಿ
ಸ್ಥಳಾಂತರಗೊಳ್ಳಲು ಫೆಲೆಸ್ತೀನೀಯರಿಗೆ ಮುಕ್ತ ಆಯ್ಕೆ: ನೆತನ್ಯಾಹು

PC: x.com/SuppressedNws
ವಾಷಿಂಗ್ಟನ್: ಅಮೆರಿಕಕ್ಕೆ ಭೇಟಿ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ನಡೆಸಿದ ಮಾತುಕತೆಯಲ್ಲಿ ಗಾಝಾದಿಂದ ಫೆಲೆಸ್ತೀನೀಯರ ಸಂಭಾವ್ಯ ಸ್ಥಳಾಂತರದ ಬಗ್ಗೆ ಚರ್ಚೆ ನಡೆಸಿರುವುದಾಗಿ ಮೂಲಗಳು ಹೇಳಿವೆ.
ಫೆಲೆಸ್ತೀನೀಯರಿಗೆ ಉತ್ತಮ ಭವಿಷ್ಯವನ್ನು ನೀಡಲು ಮತ್ತು ಅವರನ್ನು ಗಾಝಾದಿಂದ ಸ್ಥಳಾಂತರಿಸಲು ಅಮೆರಿಕ ಮತ್ತು ಇಸ್ರೇಲ್ ಇತರ ದೇಶಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಶ್ವೇತಭವನದ ಮೂಲಗಳು ಹೇಳಿವೆ. ಗಾಝಾದಲ್ಲಿ ಇಸ್ರೇಲಿನ ಆಕ್ರಮಣ ಮುಂದುವರಿದಿರುವುದು ಮತ್ತು ಒತ್ತೆಯಾಳುಗಳ ಬಿಡುಗಡೆಯಲ್ಲಿನ ವಿಳಂಬವು ಇಸ್ರೇಲ್ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಈ ಮಧ್ಯೆ, ಟ್ರಂಪ್ ಮತ್ತು ನೆತನ್ಯಾಹು ಈ ವರ್ಷ ಮೂರನೇ ಬಾರಿಗೆ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸಭೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನೆತನ್ಯಾಹು ` ಅಧ್ಯಕ್ಷ ಟ್ರಂಪ್ ಅವರು ಗಾಝಾದ ಬಗ್ಗೆ ಅದ್ಭುತ ಪರಿಕಲ್ಪನೆ ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅದುವೇ `ಮುಕ್ತ ಆಯ್ಕೆ'. ಜನರು ಇಲ್ಲಿಯೇ(ಗಾಝಾದಲ್ಲಿ) ನೆಲೆಸಲು ಬಯಸಿದರೆ ನೆಲೆಸಬಹುದು. ಆದರೆ ಅವರು ತೆರಳಲು ಬಯಸಿದರೆ ಅವರಿಗೆ ತೆರಳಲು ಅವಕಾಶವಿದೆ. ಇದು (ಗಾಝಾ) ಜೈಲಿನಂತೆ ಆಗಬಾರದು. ಮುಕ್ತ ಪ್ರದೇಶವಾಗಬೇಕು ಮತ್ತು ಜನರಿಗೆ ಮುಕ್ತ ಆಯ್ಕೆ ನೀಡಬೇಕು' ಎಂದು ಪ್ರತಿಕ್ರಿಯಿಸಿದ್ದಾರೆ.
ಫೆಲೆಸ್ತೀನೀಯರಿಗೆ ಉತ್ತಮ ಭವಿಷ್ಯ ನೀಡಲು ಬಯಸುವುದಾಗಿ ಕೆಲವು ದೇಶಗಳು ಹೇಳುತ್ತಾ ಬಂದಿವೆ. ಈ ಹೇಳಿಕೆಯ ಬಗ್ಗೆ ನಾವು ಅಮೆರಿಕದ ಜೊತೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಹಲವು ದೇಶಗಳು ಮುಂದೆ ಬಂದರೆ ಆಗ ಫೆಲೆಸ್ತೀನೀಯರಿಗೆ ಆಯ್ಕೆಯ ಸ್ವಾತಂತ್ರ್ಯವಿರುತ್ತದೆ' ಎಂದು ನೆತನ್ಯಾಹು ಹೇಳಿದ್ದಾರೆ. ಸ್ವತಂತ್ರ ಫೆಲೆಸ್ತೀನಿಯನ್ ರಾಷ್ಟ್ರವನ್ನು ಗುರುತಿಸುವುದನ್ನು ಒಳಗೊಂಡಿರುವ ಎರಡು ರಾಷ್ಟ್ರಗಳ ಪರಿಹಾರ ಸೂತ್ರದ ಕುರಿತ ಪ್ರಶ್ನೆಗೆ ಉತ್ತರಿಸಿದ ನೆತನ್ಯಾಹು ` ನಮ್ಮನ್ನು ನಾಶಗೊಳಿಸಲು ಬಯಸದ ಫೆಲೆಸ್ತೀನೀ ನೆರೆಹೊರೆಯೊಂದಿಗೆ ಶಾಂತಿಗಾಗಿ ಇಸ್ರೇಲ್ ಕಾರ್ಯನಿರ್ವಹಿಸುತ್ತದೆ. ಆದರೆ ಭದ್ರತೆಯ ಮೇಲೆ ಇಸ್ರೇಲ್ ನ ನಿಯಂತ್ರಣ ಮುಂದುವರಿಯಬೇಕು. ಇದು ಸಂಪೂರ್ಣ ರಾಷ್ಟ್ರವಲ್ಲ ಎಂದು ಜನರು ಹೇಳಿದರೆ ನಾವದಕ್ಕೆ ಕಿವಿಗೊಡುವುದಿಲ್ಲ' ಎಂದು ನೆತನ್ಯಾಹು ಪ್ರತಿಪಾದಿಸಿದ್ದಾರೆ.
ಉಭಯ ನಾಯಕರು ಗಾಝಾದಿಂದ ಫೆಲೆಸ್ತಿನೀಯರನ್ನು ಬಲವಂತವಾಗಿ ಸ್ಥಳಾಂತರಿಸುವ ವಿವಾದಾತ್ಮಕ ಪ್ರಸ್ತಾಪದ ಬಗ್ಗೆ ಚರ್ಚೆ ನಡೆಸಿದ್ದಾರೆ. ಗಾಝಾದ ನಿವಾಸಿಗಳನ್ನು ನೆರೆಯ ದೇಶಗಳಿಗೆ ಸ್ಥಳಾಂತರಿಸಬಹುದು ಎಂಬುದನ್ನು ನೆತನ್ಯಾಹು ಅವರ ಹೇಳಿಕೆಗಳು ಸೂಚಿಸಿವೆ.
ಈ ಮಧ್ಯೆ, ತಮ್ಮ ಆಡಳಿತವು ಸುತ್ತಮುತ್ತಲಿನ ದೇಶಗಳಿಂದ ಉತ್ತಮ ಸಹಕಾರವನ್ನು ಹೊಂದಿದೆ ಮತ್ತು ಏನಾದರೂ ಒಳ್ಳೆಯದು ಸಂಭವಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.







