ಮಣಿದ ನೆತನ್ಯಾಹು? ಗಾಡಿ ಐಸೆನ್ಕೋಟ್ಗೆ ಪ್ರಧಾನಿ ಹುದ್ದೆ ಬಿಟ್ಟುಕೊಡಲು ಮುಂದಾದ ಇಸ್ರೇಲ್ ಪ್ರಧಾನಿ; ವರದಿ

ಗಾಡಿ ಐಸೆನ್ಕೋಟ್ | ಬೆಂಜಮಿನ್ ನೆತನ್ಯಾಹು (Photo: PTI)
ಜೆರುಸಲೆಮ್: ಇಸ್ರೇಲ್ ನಲ್ಲಿ ಸರಕಾರ ರಚನೆ ಬಿಕ್ಕಟ್ಟು ಮುಂದುವರಿದಿರುವ ಮಧ್ಯೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ರಾಜಕೀಯ ಎದುರಾಳಿ ಗಾಡಿ ಐಸೆನ್ಕೋಟ್ ಅವರಿಗೆ ಪ್ರಧಾನಿ ಹುದ್ದೆಯನ್ನು ನೀಡುವ ಬಗ್ಗೆ ಅಧಿಕಾರ ಹಂಚಿಕೆ ಸೂತ್ರವನ್ನು ಪ್ರಸ್ತಾಪಿಸಿದ್ದಾರೆ ಎಂದು Times of Israel ವರದಿ ಮಾಡಿದೆ.
ಅಧಿಕಾರ ಹಂಚಿಕೆ ಸೂತ್ರದಡಿ, ಎರಡನೇ ಅವಧಿಯಲ್ಲಿ ತಾನೇ ಪ್ರಧಾನಿಯಾಗಿ ಕಾರ್ಯನಿರ್ವಹಿಸಲು ಸಿದ್ಧರಿರುವುದಾಗಿ ನೆತನ್ಯಾಹು ಹೇಳಿದ್ದಾರೆ. ಈ ಪ್ರಸ್ತಾಪ ಅಂತಿಮಗೊಂಡರೆ, ನೆತನ್ಯಾಹು ಅವರು ಮಹತ್ವದ ರಾಜಕೀಯ ರಾಜಿ ಮಾಡಿಕೊಂಡಂತಾಗಲಿದೆ ಎಂದು ವರದಿಯು ಉಲ್ಲೇಖಿಸಿದೆ.
ಇಸ್ರೇಲ್ ಚುನಾವಣೆಯಲ್ಲಿ ನೆತನ್ಯಾಹು ಅವರ ಲಿಕುಡ್ ಪಕ್ಷದ ನೇತೃತ್ವದ ಬಲಪಂಥೀಯ ಮೈತ್ರಿಕೂಟ ಬಹುಮತ ಪಡೆಯಲು ವಿಫಲವಾಗಿರುವುದರಿಂದ ಅವರು ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ.
ನೆತನ್ಯಾಹು ಅಧಿಕಾರದಲ್ಲಿ ಮುಂದುವರಿಯುವ ಕೊನೆಯ ಪ್ರಯತ್ನವಾಗಿ ಈ ಅಧಿಕಾರ ಹಂಚಿಕೆ ಸೂತ್ರ ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ, ನೆತನ್ಯಾಹು ಅವರ ಆಪ್ತ ವಲಯದಲ್ಲಿರುವ ಎಲ್ಲರೂ ಈ ಪ್ರಸ್ತಾಪದ ಬಗ್ಗೆ ಒಮ್ಮತ ಹೊಂದಿಲ್ಲ ಎಂದು ಹೇಳಲಾಗಿದೆ.
‘Channel 13’ ವರದಿಯ ಪ್ರಕಾರ, ಯಾಶರ್ ಪಕ್ಷದ ಮುಖ್ಯಸ್ಥ ಐಸೆನ್ಕಾಟ್ ಅವರಿಗೆ ಈ ಪ್ರಸ್ತಾಪವನ್ನು ಅನಧಿಕೃತ ಮಾರ್ಗಗಳ ಮೂಲಕ ತಲುಪಿಸಲಾಗಿದೆ.
ಹಮಾಸ್ ದಾಳಿ ಮತ್ತು ಇರಾನ್ ಸಂಘರ್ಷದ ಬಳಿಕ ಇಸ್ರೇಲ್ನಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆತಿಲ್ಲ.
ಇಸ್ರೇಲ್ ಚುನಾವಣೆಯಲ್ಲಿ ನೆತನ್ಯಾಹು ನೇತೃತ್ವದ ಮೈತ್ರಿಕೂಟ 53 ಸ್ಥಾನಗಳನ್ನು ಗೆದ್ದಿದೆ. 120 ಸದಸ್ಯ ಬಲದ ಇಸ್ರೇಲ್ ಸಂಸತ್ (ನೆಸೆಟ್)ನಲ್ಲಿ ಸರಕಾರ ರಚಿಸಲು ಒಟ್ಟು 61 ಸ್ಥಾನಗಳ ಅಗತ್ಯವಿದೆ. ಐಸೆನ್ಕೋಟ್ ನೇತೃತ್ವದ ಮೈತ್ರಿಕೂಟ 48 ಸ್ಥಾನಗಳನ್ನು ಪಡೆದಿದೆ. ಅರಬ್ ಪಕ್ಷಗಳು ಒಟ್ಟು 19 ಸ್ಥಾನಗಳನ್ನು ಗೆದ್ದು ದಾಖಲೆಯ ಸಾಧನೆ ಮಾಡಿವೆ. ಹೀಗಾಗಿ ಸರಕಾರ ರಚನೆಯಲ್ಲಿ ಈ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸಲಿದೆ.
ಈ ತಿಂಗಳ ಆರಂಭದಲ್ಲಿ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ಸರಕಾರ ರಚಿಸುವಂತೆ ಐಸೆನ್ಕೋಟ್ ಅವರಿಗೆ ಸೂಚಿಸಿದ್ದರು. ಬಹುಮತ ಸಾಬೀತುಪಡಿಸುವಷ್ಟು ಸದಸ್ಯರ ಬೆಂಬಲ ಪಡೆಯಲು ಡಿಸೆಂಬರ್ 6ರವರೆಗೆ ಅವರಿಗೆ ಕಾಲಾವಕಾಶವಿದೆ. ಐಸೆನ್ಕೋಟ್ ಸರಕಾರ ರಚಿಸುವಲ್ಲಿ ವಿಫಲರಾದರೆ, ಮೈತ್ರಿ ಸರಕಾರ ರಚನೆ ಕುರಿತು ಪರಿಶೀಲಿಸುವಂತೆ ಅಧ್ಯಕ್ಷ ಹೆರ್ಜಾಗ್ ಅವರು ನೆತನ್ಯಾಹು ಅವರನ್ನು ಆಹ್ವಾನಿಸಲಿದ್ದಾರೆ ಎಂದು ಹೇಳಲಾಗಿದೆ.
ಇಬ್ಬರಿಗೂ ಸರಕಾರ ರಚಿಸಲು ಸಾಧ್ಯವಾಗದಿದ್ದರೆ ಮತ್ತೆ ಚುನಾವಣೆ ನಡೆಯಲಿದೆ. ನೆತನ್ಯಾಹು ಆಗಲಿ, ಐಸೆನ್ಕೋಟ್ ಆಗಲಿ ಇಂತಹ ಪರಿಸ್ಥಿತಿಯನ್ನು ಬಯಸುವುದಿಲ್ಲ. ಈ ಹಿನ್ನೆಲೆಯಲ್ಲಿ ನೆತನ್ಯಾಹು ಮುಂದಿಟ್ಟಿರುವ ಸರಕಾರ ರಚನೆ ಪ್ರಸ್ತಾಪ ಮಹತ್ವ ಪಡೆದುಕೊಂಡಿದೆ.
ಮಾಜಿ ಇಸ್ರೇಲ್ ರಕ್ಷಣಾ ಪಡೆ ಮುಖ್ಯಸ್ಥ ಐಸೆನ್ಕೋಟ್ ಅವರು, ತಮ್ಮ ಮೈತ್ರಿಕೂಟದ ಪಾಲುದಾರರಾದ ಯಾಯಿರ್ ಗೋಲನ್ ಮತ್ತು ಇಸ್ರೇಲ್ ಬೆಯ್ಟೆನು ಪಕ್ಷದ ಮುಖ್ಯಸ್ಥ ಅವಿಗ್ಡರ್ ಲೀಬರ್ಮನ್ ಅವರ ಒಪ್ಪಿಗೆ ಇಲ್ಲದೆ ನೆತನ್ಯಾಹು ಅವರೊಂದಿಗೆ ಮೈತ್ರಿ ಸರಕಾರ ರಚಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಆದರೆ, ಮೈತ್ರಿಕೂಟದ ಮತ್ತೊಬ್ಬ ಪಾಲುದಾರರಾದ ನಫ್ತಾಲಿ ಬೆನೆಟ್ ಅವರು, ನೆತನ್ಯಾಹು ಅವರ ಲಿಕುಡ್ ಪಕ್ಷದೊಂದಿಗೆ ಮೈತ್ರಿ ಸರಕಾರ ರಚಿಸುವಂತೆ ಬಹಿರಂಗವಾಗಿಯೇ ಒತ್ತಾಯಿಸಿದ್ದಾರೆ.






