ನೆತನ್ಯಾಹು–ಐಸೆನ್ ಕೋಟ್ ಮಾತುಕತೆ ವಿಫಲ; ಇಸ್ರೇಲ್ ನಲ್ಲಿ ಸರ್ಕಾರ ರಚನೆಗೆ ಹಿನ್ನಡೆ
ಪ್ರಧಾನಿ ಹುದ್ದೆ, ಬೆನ್-ಗ್ವಿರ್ ಸೇರ್ಪಡೆ ವಿಚಾರದಲ್ಲಿ ಭಿನ್ನಾಭಿಪ್ರಾಯ

Photo: x.com/IndiaToday
ಟೆಲ್ ಅವೀವ್: ಇಸ್ರೇಲ್ ನಲ್ಲಿ ಹೊಸ ಸರ್ಕಾರ ರಚಿಸುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಹಂಗಾಮಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ 'ಲಿಕುಡ್' ಮತ್ತು ಗಾಡಿ ಐಸೆನ್ಕೋಟ್ ಅವರ 'ಯಶಾರ್' ಪಕ್ಷಗಳ ನಡುವೆ ನಡೆದ ಮೈತ್ರಿ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿದೆ ಎಂದು Aljazeera ವರದಿ ಮಾಡಿದೆ.
ಪ್ರಧಾನಿ ಹುದ್ದೆ ಯಾರಿಗೆ ವಹಿಸಬೇಕು ಹಾಗೂ ತೀವ್ರ ಬಲಪಂಥೀಯ ಸಚಿವ ಇಟಮಾರ್ ಬೆನ್-ಗ್ವಿರ್ ಅವರನ್ನು ಸರ್ಕಾರದಲ್ಲಿ ಸೇರಿಸಿಕೊಳ್ಳಬೇಕೇ ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯ ಇನ್ನೂ ಬಗೆಹರಿದಿಲ್ಲ.
ಇಸ್ರೇಲ್ ನ 'ಚಾನೆಲ್ 12' ವರದಿಯ ಪ್ರಕಾರ, ಎರಡೂ ಪಕ್ಷಗಳ ಪ್ರತಿನಿಧಿಗಳು ರವಿವಾರ ಹರ್ಜ್ಲಿಯಾದ ಹೋಟೆಲ್ ನಲ್ಲಿ ಸಭೆ ನಡೆಸಿದ್ದರು. ಆದರೆ, ಸರ್ಕಾರದ ನಾಯಕತ್ವ ಮತ್ತು ಬೆನ್-ಗ್ವಿರ್ ಅವರ ಸೇರ್ಪಡೆ ವಿಚಾರದಲ್ಲಿ ಒಮ್ಮತ ಮೂಡಲಿಲ್ಲ ಎನ್ನಲಾಗಿದೆ.
'ಯೆಡಿಯೊತ್ ಅಹ್ರನೋತ್' ಪತ್ರಿಕೆಯ ವರದಿಯ ಪ್ರಕಾರ, ಬೆನ್-ಗ್ವಿರ್ ಅವರನ್ನು ಸರ್ಕಾರದಲ್ಲಿ ಸೇರಿಸಿಕೊಳ್ಳಲು ಲಿಕುಡ್ ಬಯಸಿದೆ. ಆದರೆ, ಅವರನ್ನು ಹೊರಗಿಡಬೇಕೆಂದು ಯಶಾರ್ ಒತ್ತಾಯಿಸಿದೆ. ಸಭೆಯ ಬಳಿಕ ಎರಡೂ ಪಕ್ಷಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿ, ಪ್ರಮುಖ ವಿಷಯಗಳ ಕುರಿತು ತಮ್ಮ ನಿಲುವುಗಳನ್ನು ಮಂಡಿಸಿರುವುದಾಗಿ ಹಾಗೂ ಮುಂದಿನ ಸಭೆ ನಡೆಸುವುದಾಗಿ ತಿಳಿಸಿವೆ. ಆದರೆ, ಸಭೆಯ ದಿನಾಂಕವನ್ನು ಪ್ರಕಟಿಸಿಲ್ಲ.
ಅಕ್ಟೋಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಐಸೆನ್ಕೋಟ್ ಅವರ ಬಣ 48 ಸ್ಥಾನಗಳನ್ನು ಗೆದ್ದಿದೆ. ಸರ್ಕಾರ ರಚನೆಗೆ ಅಗತ್ಯವಿರುವ ಬಹುಮತಕ್ಕಿಂತ 13 ಸ್ಥಾನಗಳ ಕೊರತೆಯಿದೆ. ಸರ್ಕಾರ ರಚಿಸಲು ಐಸೆನ್ಕೋಟ್ ಅವರಿಗೆ ಡಿ. 6ರವರೆಗೆ ಅವಕಾಶವಿದ್ದು, ಅಗತ್ಯವಿದ್ದರೆ ಇನ್ನೂ 14 ದಿನಗಳ ವಿಸ್ತರಣೆಯನ್ನೂ ಪಡೆಯಬಹುದು.
ತಮ್ಮ ನೇತೃತ್ವದಲ್ಲಿ ಸರ್ಕಾರ ರಚಿಸುವುದೇ ಇಸ್ರೇಲ್ ನ ಭದ್ರತೆಗೆ ಸೂಕ್ತ ಮಾರ್ಗ ಎಂದು ನೆತನ್ಯಾಹು ಪ್ರತಿಪಾದಿಸಿದ್ದಾರೆ. ಇದರಿಂದ ಚುನಾವಣೆಯಲ್ಲಿ ದಾಖಲೆಯ 19 ಸ್ಥಾನಗಳನ್ನು ಗೆದ್ದಿರುವ ಫೆಲೆಸ್ತೀನ್ ನಾಗರಿಕರನ್ನು ಪ್ರತಿನಿಧಿಸುವ ಅರಬ್ ಪಕ್ಷಗಳನ್ನು ಸರ್ಕಾರದಲ್ಲಿ ಸೇರಿಸಿಕೊಳ್ಳದೆ ಆಡಳಿತ ರಚಿಸಲು ಸಾಧ್ಯವಾಗಲಿದೆ.
ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಅವರು 'ಟುಗೆದರ್', 'ಯಶಾರ್', 'ಲಿಕುಡ್' ಮತ್ತು ಅವಿಗ್ಡೋರ್ ಲೈಬರ್ಮನ್ ಅವರ 'ಇಸ್ರೇಲ್ ಬೀಟೈನು' ಪಕ್ಷಗಳನ್ನು ಒಳಗೊಂಡ ಮೈತ್ರಿ ಸರ್ಕಾರ ರಚಿಸುವ ಪ್ರಸ್ತಾಪ ಮಾಡಿದ್ದಾರೆ ಎಂದು ಚಾನೆಲ್ 12 ವರದಿ ಮಾಡಿದೆ.
ಈ ಪ್ರಸ್ತಾಪದ ಪ್ರಕಾರ, ಮೊದಲಿಗೆ ಐಸೆನ್ಕೋಟ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಬೇಕು. ಬಳಿಕ ನೆತನ್ಯಾಹು ಅವರಿಗೆ ಪ್ರಧಾನಿ ಹುದ್ದೆ ಹಸ್ತಾಂತರಿಸಬೇಕು. ಆದರೆ, ಈ ಅಧಿಕಾರ ಹಂಚಿಕೆ ಪ್ರಸ್ತಾಪಕ್ಕೆ ಐಸೆನ್ಕೋಟ್ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನೆತನ್ಯಾಹು ಮೊದಲು ಪ್ರಧಾನಿಯಾಗಬೇಕು ಎಂಬುದು ಅವರ ಮತ್ತು ಲಿಕುಡ್ ಪಕ್ಷದ ನಿಲುವು. ಮತ್ತೊಂದೆಡೆ, ನೆತನ್ಯಾಹು ಅವರನ್ನು ಒಳಗೊಂಡ ಯಾವುದೇ ಸರ್ಕಾರದಲ್ಲಿ ಭಾಗವಹಿಸುವುದಿಲ್ಲ ಎಂದು ಲೈಬರ್ಮನ್ ಹೇಳಿದ್ದಾರೆ.
ಮೈತ್ರಿ ಮಾತುಕತೆ ವಿಫಲವಾದರೆ, ಐಸೆನ್ಕೋಟ್ ಅವರ ಯಶಾರ್ ಪಕ್ಷವು ನೆಸ್ಸೆಟ್ ನಲ್ಲಿ ಸರ್ಕಾರ ರಚಿಸಲು ವಿಶ್ವಾಸ ಮತ ಯಾಚಿಸುವ ಯೋಜನೆ ಹೊಂದಿದೆ. ಸರ್ಕಾರ ರಚಿಸಲು ಯಶಾರ್ ಪಕ್ಷವು ಯೂಸೆಫ್ ಜಬರೀನ್ ಮತ್ತು ಮನ್ಸೂರ್ ಅಬ್ಬಾಸ್ ನೇತೃತ್ವದ ಅರಬ್ ಪಕ್ಷಗಳ ಬೆಂಬಲ ಪಡೆಯುವ ಸಾಧ್ಯತೆಯಿದೆ. ಈ ಪಕ್ಷಗಳು ಸರ್ಕಾರದಲ್ಲಿ ಪಾಲ್ಗೊಳ್ಳದೆ, ಹೊರಗಿನಿಂದ ಬೆಂಬಲ ನೀಡಬಹುದು.
ಇತ್ತೀಚೆಗೆ ಅರಬ್ ಪಕ್ಷಗಳ ಬೆಂಬಲದೊಂದಿಗೆ ಇಸ್ರೇಲ್ ಸಂಸತ್ತಿನ (ನೆಸ್ಸೆಟ್) ಸ್ಪೀಕರ್ ಆಯ್ಕೆ ಪ್ರಕ್ರಿಯೆಯಲ್ಲಿ ವಿರೋಧ ಪಕ್ಷಗಳು ಪ್ರಮುಖ ಪಾತ್ರ ವಹಿಸಿದ್ದವು. ನ. 18ರಂದು ಮತನ್ ಕಹಾನಾ ಅವರನ್ನು ಹೊಸ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿತ್ತು.







