ಉಕ್ರೇನ್ಗೆ ಎಫ್-16 ಯುದ್ಧವಿಮಾನ ಒದಗಿಸಲು ನೆದರ್ಲ್ಯಾಂಡ್ ಸಮ್ಮತಿ

Photo courtesy : ಎಫ್-16 ಯುದ್ಧ ವಿಮಾನ | NDTV
ಆಮ್ಸ್ಟರ್ಡಾಂ : ಉಕ್ರೇನ್ನ ಸೋವಿಯತ್ ಯುಗದ ವಾಯುಪಡೆಯನ್ನು ಸಶಕ್ತಗೊಳಿಸಲು ಆ ದೇಶಕ್ಕೆ ಅತ್ಯಾಧುನಿಕ ಎಫ್-16 ಯುದ್ಧ ವಿಮಾನಗಳನ್ನು ಒದಗಿಸುವ ನೆದರ್ಲ್ಯಾಂಡ್ನ ನಿರ್ಧಾರ ಐತಿಹಾಸಿಕ ನಡೆಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ರವಿವಾರ ಶ್ಲಾಘಿಸಿದ್ದಾರೆ.
ನೆದರ್ಲ್ಯಾಂಡ್-ಅಮೆರಿಕ ಜಂಟಿ ಸಹಯೋಗದಲ್ಲಿ ತಯಾರಿಸಲಾದ ಎಫ್-16 ಯುದ್ಧವಿಮಾನ ಸಹಿತ ಆಧುನಿಕ ಶಸ್ತ್ರಾಸ್ತ್ರಗಳನ್ನು ಉಕ್ರೇನ್ಗೆ ಪೂರೈಸುವ ಯೋಜನೆಗೆ ಅಮೆರಿಕ ಒಪ್ಪಿಗೆ ಸೂಚಿಸಿದ ಬಳಿಕ ನೆದರ್ಲ್ಯಾಂಡ್ ಈ ಘೋಷಣೆ ಮಾಡಿದೆ. ನೆದರ್ಲ್ಯಾಂಡ್ಗೆ ರವಿವಾರ ಅಪರಾಹ್ನ ಆಗಮಿಸಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಬಳಿಕ ಎಫ್-6 ಯುದ್ಧವಿಮಾನಗಳನ್ನು ವೀಕ್ಷಿಸಿದರು ಎಂದು ನೆದರ್ಲ್ಯಾಂಡ್ ಸರಕಾರದ ವಕ್ತಾರರನ್ನು ಉಲ್ಲೇಖಿಸಿದ ಎಎಫ್ಪಿ ವರದಿ ಹೇಳಿದೆ. ಎಫ್-16 ಯುದ್ಧವಿಮಾನಗಳನ್ನು ಪೂರೈಸುವ ಒಪ್ಪಂದಕ್ಕೆ ನೆದರ್ಲ್ಯಾಂಡ್ ಪ್ರಧಾನಿ ಮಾರ್ಕ್ ರ್ಯೂಟ್ ಸಹಿ ಹಾಕಿದ್ದು ಅಗತ್ಯದ ಶಿಷ್ಟಾಚಾರ ಪೂರ್ಣಗೊಂಡ ಬಳಿಕ ಇವುಗಳನ್ನು ಪೂರೈಸಲಾಗುವುದು ಎಂದಿದ್ದಾರೆ. ಬಳಿಕ ರ್ಯೂಟ್ ಜತೆ ಜಂಟಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಝೆಲೆನ್ಸ್ಕಿ `ಇದು ಉಕ್ರೇನ್ನ ವಾಯುರಕ್ಷಣಾ ಸಾಮಥ್ರ್ಯವನ್ನು ಹೆಚ್ಚಿಸುವತ್ತ ಮತ್ತೊಂದು ಮಹತ್ವದ ಕ್ರಮವಾಗಿದೆ' ಎಂದು ಶ್ಲಾಘಿಸಿದರು.
ಪಾಶ್ಚಿಮಾತ್ಯರ ಎಫ್-16 ಯುದ್ಧವಿಮಾನಗಳನ್ನು ಉಕ್ರೇನ್ಗೆ ಒದಗಿಸುವುದನ್ನು ಪರಮಾಣು ಬೆದರಿಕೆ ಎಂದು ಪರಿಗಣಿಸಲಾಗುವುದು ಎಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಪ್ರತಿಕ್ರಿಯಿಸಿದ್ದಾರೆ. ಎಫ್-16 ಯುದ್ಧವಿಮಾನಗಳು ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮಥ್ರ್ಯ ಹೊಂದಿದೆ.





