ಶ್ವೇತಭವನದ ವರದಿಗಾರರ ಭೋಜನಕೂಟದಲ್ಲಿ ದಾಳಿ ನಡೆಸುವ ಮುನ್ನ ಶಸ್ತ್ರಾಸ್ತ್ರಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಶಂಕಿತ!

Photo Credit ; bbc.com
ವಾಷಿಂಗ್ಟನ್: ಶ್ವೇತಭವನದ ವರದಿಗಾರರ ಸಂಘ ಆಯೋಜಿಸಿದ್ದ ಭೋಜನಕೂಟದಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ, ದಾಳಿಗೆ ಮುನ್ನ ಶಂಕಿತನು ತನ್ನ ಹೋಟೆಲ್ ಕೋಣೆಯಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಸೆಲ್ಫಿ ತೆಗೆದುಕೊಂಡಿರುವುದು ನ್ಯಾಯಾಲಯಕ್ಕೆ ಸಲ್ಲಿಸಿದ ಹೊಸ ದಾಖಲೆಗಳಲ್ಲಿ ಬಹಿರಂಗವಾಗಿದೆ ಎಂದು BBC ವರದಿ ಮಾಡಿದೆ.
ಕೋಲ್ ಥಾಮಸ್ ಆಲೆನ್ (31) ವಿರುದ್ಧ ಅಮೆರಿಕ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ, ಎಪ್ರಿಲ್ 25ರ ಘಟನೆಗೆ ಮುನ್ನ ಆತನು ನಡೆಸಿದ ಚಟುವಟಿಕೆಗಳ ವಿವರಗಳೊಂದಿಗೆ ಫೋಟೋಗಳನ್ನು ಲಗತ್ತಿಸಲಾಗಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಆರೋಪಿಯನ್ನು ಬಂಧನದಲ್ಲೇ ಇರಿಸಬೇಕೆಂದು ಪ್ರಾಸಿಕ್ಯೂಟರ್ ಗಳು ಮನವಿ ಮಾಡಿದ್ದಾರೆ.
ಫೋಟೋಗಳಲ್ಲಿ ಆಲೆನ್ ತನ್ನ ಹೋಟೆಲ್ ಕೋಣೆಯಲ್ಲಿ ಕನ್ನಡಿಯ ಮುಂದೆ ನಿಂತು ತನ್ನ ದೇಹಕ್ಕೆ ಹಲವು ಶಸ್ತ್ರಾಸ್ತ್ರಗಳನ್ನು ಕಟ್ಟಿಕೊಂಡಿರುವುದು ಕಾಣುತ್ತದೆ. ಚಾಕು, ಮದ್ದುಗುಂಡುಗಳಿರುವ ಚೀಲ ಹಾಗೂ ಇತರೆ ಸಾಧನಗಳನ್ನು ಧರಿಸಿದ್ದಾನೆ ಎಂದು ಪ್ರಾಸಿಕ್ಯೂಟರ್ ಗಳು ತಿಳಿಸಿದ್ದಾರೆ.
ಆಲೆನ್ ವಿರುದ್ಧ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ ಆರೋಪ ಸೇರಿದಂತೆ ಹಲವು ಗಂಭೀರ ಆರೋಪಗಳಿದ್ದು, ಆರೋಪಿಯು ಅದನ್ನು ನಿರಾಕರಿಸಿದ್ದಾನೆ.
ಘಟನೆಯ ದಿನ, ವಾಷಿಂಗ್ಟನ್ ಹಿಲ್ಟನ್ ಹೋಟೆಲ್ ನ ಭೋಜನಕೂಟಕ್ಕೆ ಪ್ರವೇಶಿಸುವಾಗ ಆಲೆನ್ ಅರೆ-ಸ್ವಯಂಚಾಲಿತ ಹ್ಯಾಂಡ್ ಗನ್, ಪಂಪ್-ಆಕ್ಷನ್ ಶಾಟ್ ಗನ್ ಹಾಗೂ ಮೂರು ಚಾಕುಗಳನ್ನು ಹೊತ್ತೊಯ್ದಿದ್ದಾನೆ ಎಂದು ಆರೋಪಿಸಲಾಗಿದೆ.
ಶನಿವಾರ ರಾತ್ರಿ ಗುಂಡಿನ ಸದ್ದು ಕೇಳಿಬಂದ ತಕ್ಷಣ, ಅಧ್ಯಕ್ಷ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹಾಗೂ ಇತರ ಅಧಿಕಾರಿಗಳನ್ನು ಬಾಲ್ ರೂಮ್ ನಿಂದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ದಾಳಿಯಲ್ಲಿ ಒಬ್ಬ ರಹಸ್ಯ ಸೇವಾ ಏಜೆಂಟ್ ಗೆ ಗುಂಡು ತಗುಲಿದರೂ ಗಂಭೀರ ಗಾಯವಾಗಿಲ್ಲ.
ದಾಖಲೆಗಳ ಪ್ರಕಾರ, ರಾತ್ರಿ ಸುಮಾರು 8:03ಕ್ಕೆ ಆಲೆನ್ ತನ್ನ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾನೆ. ನಂತರ ಭುಜದ ಹೋಲ್ಸ್ಟರ್ ವೈರ್ ಕಟರ್ ಗಳನ್ನು ಧರಿಸಿದ್ದಾನೆ. ಮುಂದಿನ ಅರ್ಧ ಗಂಟೆ ಆತ ಭೋಜನಕೂಟದ ನೇರ ಪ್ರಸಾರ ಮತ್ತು ಅಧ್ಯಕ್ಷರ ಹಾಜರಾತಿ ಕುರಿತು ವೆಬ್ ಸೈಟ್ ಗಳನ್ನು ಪರಿಶೀಲಿಸಿದ್ದಾನೆ ಎಂದು ತಿಳಿದುಬಂದಿದೆ.
ಅನಂತರ ಶಾಟ್ ಗನ್ ಅನ್ನು ಮರೆಮಾಡಿದ್ದ ಉದ್ದನೆಯ ಕಪ್ಪು ಕೋಟ್ ಅನ್ನು ಎಸೆದು, ತಪಾಸಣಾ ಕೇಂದ್ರದತ್ತ ಶಸ್ತ್ರಾಸ್ತ್ರದೊಂದಿಗೆ ಧಾವಿಸಿದ್ದಾನೆ. ಲೋಹ ಶೋಧಕದ ಮೂಲಕ ಓಡುವಾಗ ಶಾಟ್ ಗನ್ ಅನ್ನು ಮೇಲಕ್ಕೆತ್ತಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾದ ತನ್ನ ಮನೆಯಿಂದ ವಾಷಿಂಗ್ಟನ್ ಗೆ ಬರುತ್ತಿದ್ದಾಗ, ಆಲೆನ್ ತನ್ನ ಫೋನ್ನಲ್ಲಿ ಪ್ರಯಾಣದ ಟಿಪ್ಪಣಿಗಳನ್ನು ಮಾಡಿಕೊಂಡಿದ್ದಾನೆ. ದಾಳಿಗೆ ಮುನ್ನ ತನ್ನ ಕುಟುಂಬಕ್ಕೆ ಕಳುಹಿಸಿದ ಇಮೇಲ್ ನಲ್ಲಿ “ಆಡಳಿತದ ಅಧಿಕಾರಿಗಳೇ ಗುರಿ” ಎಂದು ಬರೆದಿದ್ದಾನೆ ಎಂದು ಅಫಿಡವಿಟ್ ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಾಸಿಕ್ಯೂಟರ್ ಗಳು, ಈ ಕೃತ್ಯವನ್ನು “ಪೂರ್ವಯೋಜಿತ ಹಾಗೂ ಹಿಂಸಾತ್ಮಕ” ಎಂದು ವಿವರಿಸಿ, ಆಲೆನ್ ನನ್ನು ಬಿಡುಗಡೆ ಮಾಡಿದರೆ ಸಾರ್ವಜನಿಕರ ಸುರಕ್ಷತೆಗೆ ಅಪಾಯ ಉಂಟಾಗಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆಲೆನ್ ವಿರುದ್ಧ ರಾಜ್ಯಗಳ ನಡುವೆ ಬಂದೂಕು ಸಾಗಣೆ ಹಾಗೂ ಹಿಂಸಾಚಾರದ ಅಪರಾಧದಲ್ಲಿ ಶಸ್ತ್ರಾಸ್ತ್ರ ಬಳಕೆ ಸೇರಿದಂತೆ ಇತರೆ ಆರೋಪಗಳೂ ಇದ್ದು, ತಪ್ಪಿತಸ್ಥನೆಂದು ಸಾಬೀತಾದರೆ ಜೀವಾವಧಿ ಶಿಕ್ಷೆ ಸೇರಿದಂತೆ ಗಂಭೀರ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
ಅಧಿಕಾರಿಗಳ ಪ್ರಕಾರ, ಆಲೆನ್ ಎಪ್ರಿಲ್ 21ರಂದು ಕ್ಯಾಲಿಫೋರ್ನಿಯಾದ ಟೊರೆನ್ಸ್ ನಗರದಿಂದ ಹೊರಟು, ಚಿಕಾಗೋ ಮೂಲಕ ರೈಲಿನಲ್ಲಿ ವಾಷಿಂಗ್ಟನ್ ಗೆ ಬಂದಿದ್ದಾನೆ.






